ಹಾಸನ : ಸ್ವಚ್ಛತೆ ಕಾಪಾಡದೆ ವ್ಯಾಪಾರ ನಡೆಸಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಹೂವಿನ ವ್ಯಾಪಾರಿಗಳು ಮತ್ತು ಗೂಡಂಗಡಿಯನ್ನು ತೆರವು ಮಾಡಲು ಮುಂದಾದಾಗ ಮಾತಿನ ಚಕಮಕಿ ನಡೆದಿದೆ.
ನಗರದ ಮಹಾವೀರ ವೃತ್ತ ಹಾಗೂ ಕಟ್ಟಿನಕೆರೆ ಮಾರುಕಟ್ಟೆ ಮುಖ್ಯದ್ವಾರದಲ್ಲಿ ಸಾಮಾಜಿಕ ಅಂತರವಿಲ್ಲದೆ ಅಕ್ಕಪಕ್ಕದಲ್ಲಿ ಪೆಟ್ಟಿಗೆ, ಟೈರುಗಳ ಮೇಲೆ ವ್ಯಾಪಾರ ಮಾಡಲಾಗುತ್ತಿತ್ತು. ಕಸವನ್ನು ಎಲ್ಲೆಂದರಲ್ಲಿ ರಸ್ತೆ ಮೇಲೆ ಹಾಕುತ್ತಿದ್ದ ಬಗ್ಗೆ ಅಧಿಕಾರಿಗಳಿಗೆ ದೂರು ಬಂದು ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ನಗರಸಭೆ ವಾಹನದೊಂದಿಗೆ ತೆರವು ಕಾರ್ಯಾಚರಣೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಹೂವಿನ ವ್ಯಾಪಾರಿಗಳು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಹಾಗೂ ನಗರಸಭೆ ಆಯುಕ್ತರ ಮಧ್ಯೆ ಚರ್ಚೆ ನಡೆಯಿತು. ಸ್ವಚ್ಛತೆ, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿ ವ್ಯಾಪಾರ ಮಾಡುವ ಬಗ್ಗೆ ಭರವಸೆ ನೀಡಿದ ಮೇಲೆ ಆಯುಕ್ತರು ಸುಮ್ಮನಾದರು. ಇದಾದ ಬಳಿಕ ಜವಾಬ್ಧಾರಿ ಹೊತ್ತುಕೊಂಡ ರೈತ ಸಂಘದ ಅಧ್ಯಕ್ಷ ಬಾಬು ಮೇಲು ಕೂಡ ವ್ಯಾಪಾರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಪಾಲಿಸದೆ ವ್ಯಾಪಾರ ವಹಿವಾಟು ಮುಂದುವರಿಸಿದರೆ ಸಾರ್ವಜನಿಕರ ಪರವಾಗಿ ನಿಂತು ಅಂತಹ ವ್ಯಾಪಾರಸ್ಥರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಲಾಗುವ ಎಚ್ಚರಿಕೆಯನ್ನು ಪಾಲಿಕೆ ಅಧಿಕಾರಿಗಳು ನೀಡಿದ್ದಾರೆ.