ಸಕಲೇಶಪುರ(ಹಾಸನ): ಯಾವುದೇ ಶಕ್ತಿ ಸಕಲೇಶಪುರಕ್ಕೆ ಬಂದ್ರೂ ಮಂಜಣ್ಣನ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಬಹಿರಂಗ ಸಭೆಯಲ್ಲಿ ಸವಾಲು ಹಾಕಿದರು. ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಸಕಲೇಶಪುರ ಅಭ್ಯರ್ಥಿ ಸಿಮೆಂಟ್ ಮಂಜು ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ ಅವರು, ಇವತ್ತು ಕಟ್ಟಾಯ ಹಾಸನ ತಾಲೂಕಿಗೆ ಸೇರುತ್ತದೆ. ನಾನೊಂದು ಶಪಥ ಮಾಡುತ್ತೇನೆ. ಆಲೂರು ಮತ್ತು ಕಟ್ಟಾಯ ಭಾಗದಲ್ಲಿ ಮತಗಳ ಜತೆಗೆ 10 ಸಾವಿರ ಬಹುಮತ ಈ ಬಾರಿ ಬಿಜೆಪಿ ಪಕ್ಷಕ್ಕೆ ಬರುತ್ತದೆ ಎಂದರು.
ಈ ಚುನಾವಣೆ ಒಬ್ಬ ಸಾಮಾನ್ಯ ಕಾರ್ಯಕರ್ತ ಮತ್ತು ದೊಡ್ಡ ರಾಜಕೀಯ ಶಕ್ತಿಗಳ ನಡುವೆ ನಡೆಯುತ್ತಿರುವ ಮಹಾಯುದ್ಧ. ಬೇರೆ ಊರಿಂದ ಬಂದು ಸಕಲೇಶಪುರವನ್ನು ಟೂರಿಂಗ್ ಟಾಕೀಸ್ ಮಾಡಿಕೊಂಡು ಅಧಿಕಾರ ಮಾಡುವ ಅವಶ್ಯಕತೆ ಇಲ್ಲ. ಜನಸಾಮಾನ್ಯರ ಕಷ್ಟ ಅರಿತಿರುವ ಒಬ್ಬ ಸಾಮಾನ್ಯ ಕಾರ್ಯಕರ್ತ ನಿಮ್ಮ ಜತೆಗಿದ್ದಾನೆ ಎಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಂಡು ಮತ ಹಾಕಿ ಅವರನ್ನು ಗೆಲ್ಲಿಸಿ ಕೊಡಿ ಎಂದು ಮತಯಾಚನೆ ಮಾಡಿದರು.
ಆರು ಬಾರಿ ಶಾಸಕರಾಗಿ ಗೆದ್ದಿರುವ ಎಚ್.ಕೆ.ಕುಮಾರಸ್ವಾಮಿ ಅವರ ಕೊನೆ ಚುನಾವಣೆ. ಅವರ ಬಗ್ಗೆ ಮಾತನಾಡುವುದು ಬೇಡ. 65 ವರ್ಷ ದಾಟಿದೆ. ಹಾಗಾಗಿ ಅವರು ಸೋತರೂ ಮನೆಗೆ ಕಳುಹಿಸುತ್ತಾರೆ. ಗೆದ್ದರೂ ಮುಂದಿನ ಬಾರಿ ಅವರ ಪಕ್ಷದವರೇ ಮನೆಗೆ ಕಳಿಸ್ತಾರೆ. ಇಷ್ಟು ವರ್ಷ ಗೆದ್ರೂ ಕೂಡ ಅವರು ಮನೆ ಬಿಟ್ಟು ಬರಲಿಲ್ಲ. ಈಗ ನೀವು ಗೆಲ್ಲಿಸಿದರೂ ಅವರು ಮನೆ ಬಿಟ್ಟು ಬರೋದಿಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ದುಡ್ಡು ಕೆಲಸ ಮಾಡೋದಿಲ್ಲ. ಕಾರ್ಯಕರ್ತರೇ ಶಕ್ತಿ ಏನೆಂಬುವುದನ್ನು ತೋರಿಸಿ ಕೊಡುವುದಕ್ಕೆ ಸಕಲೇಶಪುರದಲ್ಲಿ ಒಬ್ಬ ಸಿಮೆಂಟ್ ಮಂಜಣ್ಣ ಎಂಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಚುನಾವಣೆಗೆ ಬಿಜೆಪಿ ನಿಲ್ಲಿಸಿದೆ. ಇದು ಬಿಜೆಪಿ ದೇಶಕ್ಕಾಗಿ ಕೊಡುತ್ತಿರುವ ಸಂದೇಶ ಎಂದು ತಿಳಿಸಿದರು.
ಇದನ್ನೂಓದಿ: ಬಿರುಗಾಳಿ ಸಹಿತ ಭಾರಿ ಮಳೆ.. ಅಮಿತ್ ಶಾ ಅವರ ರೋಡ್ ಶೋ ರದ್ದು