ಹಾಸನ: ಹಳೇಬೀಡು ತಾಲೂಕು ಕೇಂದ್ರದಲ್ಲಿರುವ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದಾಗಿ ಉತ್ತಮ ಆರೋಗ್ಯ ಸೇವೆ ದೊರೆಯದೇ ರೋಗಿಗಳು ಪರದಾಡುವಂತಾಗಿದೆ.
ಸ್ಥಳೀಯ ಸಂಘಟನೆಗಳ ಹೋರಾಟದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಸಮುದಾಯ ಆರೋಗ್ಯ ಕೇಂದ್ರವನ್ನು ಕೆಲವು ವರ್ಷಗಳ ಹಿಂದೆ ನಿರ್ಮಾಣ ಮಾಡಿತ್ತು. 50 ಹಾಸಿಗೆಗಳು ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ತಲೆದೋರಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರವಾಸಿಗರೂ ಭೇಟಿ ನೀಡುವ ಕೇಂದ್ರದಲ್ಲಿ ವೈದ್ಯರು ಇಲ್ಲದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಖಾಲಿ ಇರುವುದು ಸೇರಿದಂತೆ ನಾನಾ ಸಮಸ್ಯೆಗಳು ಜನತೆಯನ್ನು ಕಾಡುತ್ತಿವೆ. ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರು ಹೇಳಿದರು.
ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದರೂ ನಿತ್ಯ ನೂರಾರ ಜನರು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯಕ್ಕೆ ಬರುತ್ತಾರೆ. 50 ಹಾಸಿಗೆಯ ಆಸ್ಪತ್ರೆಗೆ ಸಮನಾಗಿ ವೈದ್ಯರು ಹಾಗೂ ದಾದಿಯರು ಇಲ್ಲ. ಆಸ್ಪತ್ರೆಗೆ ರೋಗಿ ಬಂದರೇ ಇರುವ ಓರ್ವ ನರ್ಸ್, ವೈದ್ಯರಿಗೆ ಕರೆ ಮಾಡಿ ಬರ ಹೇಳುತ್ತಾರೆ. ಇಲ್ಲವೆ ತಾವೇ ರೋಗಿಗೆ ಚಿಕಿತ್ಸೆ ಕೊಟ್ಟು ಔಷಧಿ ನೀಡುತ್ತಾರೆ ಎಂದು ಪ್ರಾಂಶುಪಾಲ ಡಾ. ಕುಮಾರಸ್ವಾಮಿ ಆರೋಪಿಸಿದರು.
ನವೀಕರಣಗೊಂಡ ಆಸ್ಪತ್ರೆ ವ್ಯಾಪ್ತಿಯಲ್ಲಿ ವೈದ್ಯ ಸಿಬ್ಬಂದ ತಂಗಲು ಸೂಕ್ತ ಸೌಲಭ್ಯಗಳಿಲ್ಲ. ಮೂಲಸೌಕರ್ಯದ ಕೊರತೆಯಿಂದ ವೈದ್ಯರು ಇಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವೈದ್ಯರಿಗೆ ನಿರ್ಮಿಸಲಾದ ಸಮುಚ್ಚಯ ಸಮಸ್ಯೆಗಳ ಕೂಪವಾಗಿದೆ. ಕಟ್ಟಡ ದೊಡ್ಡದಿದ್ದರೂ ಸೌಕರ್ಯಗಳು ಕನಿಷ್ಠ ಮಟ್ಟದಲ್ಲಿವೆ. ಹೀಗಾಗಿ, ವೈದ್ಯರು ಬಂದ ವೇಗದಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ ಎಂದು ಸ್ಥಳೀಯ ನಿವಾಸಿ ಪುಟ್ಟಸ್ವಾಮಿ ಆರೋಪಿಸಿದರು.