ಹಾಸನ: ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 ರಿಂದ 600 ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದು, ಶಾಲೆಗಳ ಅಭಿವೃದ್ಧಿಗೂ ಹಾಗೂ ಗ್ಯಾರಂಟಿಗೂ ಯಾವ ಸಂಬಂಧವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಆದ ಮೇಲೆ ಹಾಸನ ನಗರದಲ್ಲಿ ಒಬಿಸಿ ಸಭೆ ಹಮ್ಮಿಕೊಳ್ಳಬೇಕಿತ್ತು. ಕಾರಣಾಂತರಗಳಿಂದ ಹಾಸನ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಒಬಿಸಿ ಸಭೆ ನಡೆಸಲು ಆಗಿಲ್ಲ. ರಾಜ್ಯದ ಜನರು ಬದಲಾವಣೆ ಬಯಸಿದ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ ಎಂದು ಭರವಸೆ ನೀಡಿದರು.
ಶಿಕ್ಷಣ ಇಲಾಖೆ ದೊಡ್ಡ ಇಲಾಖೆ ಸಮಸ್ಯೆಗಳು ಹೆಚ್ಚು ಇವೆ. ರಾಜ್ಯದಲ್ಲಿ 53 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಈಗಾಗಲೇ 13 ಸಾವಿರ ಶಿಕ್ಷಕರ ನೇಮಾಕಾತಿ ಮಾಡಿಕೊಂಡಿದ್ದೇವೆ.ಇನ್ನೂ 20 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ: ರಾಜ್ಯದಲ್ಲಿ ಶಿಥಿಲಗೊಂಡಿರುವ ಶಾಲೆ ಕಟ್ಟಡ ದುರಸ್ತಿ ಮಾಡಲಾಗುವುದು. ಪ್ರಸ್ತುತ ಕರ್ನಾಟಕ ಪಬ್ಲಿಕ್ ಶಾಲೆಗಳು ಬಹಳ ಅವಶ್ಯಕತೆ ಇದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 - 600 ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ ಮಾಡಲಾಗುವುದು. ಪ್ರತಿ ವಿಧಾನಸಭೆ ಸದಸ್ಯರಿಗೆ ಶಾಸಕರಿಗೆ 5-6 ಶಾಲೆ ಕೊಡಲಾಗುವುದು ಎಂದರು.
ಮೊದಲು ಒಂದು ಮೊಟ್ಟೆ ಕೊಡುತ್ತಿದ್ದರು. ಈಗ ಎರಡು ಮೊಟ್ಟೆ ಕೊಡುತ್ತಿದ್ದೇವೆ. ಮುಂದಿನ ಅಧಿವೇಶನದ ನಂತರ ರಾಗಿ ಮಾಲ್ಟ್ ವಿತರಣೆ ಮಾಡಲಾಗುವುದು. ನಾನು ಶಿಕ್ಷಣ ಸಚಿವನಾಗಿ ಶಿಕ್ಷಣ ಇಲಾಖೆ ಅರ್ಥಮಾಡಿಕೊಳ್ಳಲು 6 ತಿಂಗಳಾಗಿದೆ. ಮಕ್ಕಳು ಪುನಃ ಸರ್ಕಾರಿ ಶಾಲೆಯಲ್ಲಿ ಇರುವಂತೆ ವಾತಾವರಣ ನಿರ್ಮಾಣ ಮಾಡಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಖಾಸಗಿ ಶಾಲೆಗಳು ಮುಂದೆ ಸರ್ಕಾರಿ ಶಾಲೆಗಳು ಗೋಡೌನ್ ಆಗಿವೆ. ಹಿಂದಿನ ಸರ್ಕಾರ ಶಾಲೆಗಳನ್ನು ಈ ರೀತಿ ನಮಗೆ ಈ ಬಳುವಳಿ ಕೊಟ್ಟಿದ್ದಾರೆ. ಸೋರುತ್ತಿರುವ ಕಟ್ಟಡಗಳಿಗೆ ಶಾಶ್ವತ ಪರಿಹಾರ ಒದಗಿಸಲಾಗುವುದು. 3 ವರ್ಷದೊಳಗೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಮಕ್ಕಳು ಭರ್ತಿಯಾಗುವಂತೆ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಖಾಸಗಿ ಶಾಲೆ ನಿರ್ಮಾಣ ತಡೆಯಲು ನಮಗೆ ಯಾವುದೇ ಅಧಿಕಾರ ಇಲ್ಲ. ರಾಜ್ಯದಲ್ಲಿ 1600 ಶಾಲೆಗಳು ಯಾವುದೇ ಅನುಮತಿ ಪಡೆಯದೇ ನಡೆಯುತ್ತಿವೆ. ಮಕ್ಕಳ ಭವಿಷ್ಯದ ಕಾರಣ ಅವುಗಳನ್ನು ಮುಚ್ಚಿಸಲು ಸ್ವಲ್ಪ ತಡವಾಗುತ್ತಿದೆ ಎಂದರು.
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ, ಬರಗಾಲ ವೀಕ್ಷಣೆ ಮಾಡಲು ಹೊರಟಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಸಂಸದರು ಸೇರಿ ಪ್ರಧಾನಿ ಮೋದಿ ಅಮಿತ್ ಶಾ ಮನೆಗೆ ಹೋಗಿ, ಬರ ಪರಿಹಾರ, ಕಾವೇರಿ ನದಿ ನೀರಿನ ವಿಚಾರದಲ್ಲಿ ಚರ್ಚೆ ಮಾಡಲಿ ಎಂದು ಆಗ್ರಹಿಸಿದರು.
ಜಾತಿ ಗಣತಿ ವರದಿ: ಜಾತಿ ಗಣತಿ ವರದಿ ಶೀಘ್ರ ಬಿಡುಗಡೆ ಆಗಬೇಕು. ವರದಿ ಮಾಹಿತಿ ಸೋರಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸೋರಿಕೆ ಆಗಿದ್ದರೆ, ಅಥವಾ ಕಳೆದು ಹೋಗಿದರೆ ಅದರ ಬಗ್ಗೆ ತನಿಖೆ ನಡೆಯಲಿ. ಡಿಸಿಎಂ ಡಿ ಕೆ ಶಿವಕುಮಾರ್ ಪ್ರಕರಣ ವಾಪಸು ತೆಗೆದುಕೊಳ್ಳಬಾರದು ಎಂದು ಕಾನೂನು ಇಲ್ಲ. ವಿರೋಧ ಪಕ್ಷದ ಟೀಕೆ ಟಿಪ್ಪಣಿಗೆ ಉತ್ತರ ಕೊಡುವುದಿಲ್ಲ ಎಂದರು.
ಇದನ್ನೂಓದಿ:ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಸಜ್ಜಾದ ಬಿಜೆಪಿ-ಜೆಡಿಎಸ್