ಹಾಸನ: ರಕ್ತದಾನಿಗಳಿಗೆ ನಾವು ಅಭಿನಂದನೆ ಹೇಳಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಚೇರ್ಮನ್ ಎಚ್.ಪಿ. ಮೋಹನ್ ಹೇಳಿದರು.
ಹೆಚ್ಚು ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಮೋಹನ್, ರಕ್ತದಾನ ಮಹಾದಾನ ಎಂಬುದನ್ನು ಪ್ರತಿಯೊಬ್ಬರೂ ಅರಿತು ಸ್ವಯಂ ಪ್ರೇರಿತವಾಗಿ ರಕ್ತ ನೀಡಲು ಮುಂದೆ ಬರುವಂತೆ ಸಲಹೆ ನೀಡಿದರು. ಗ್ರಾಮಾಂತರ ಪ್ರದೇಶದಲ್ಲಿ ಅರಿವು ಕಡಿಮೆ ಇದ್ದು, ಇಂತಹ ಶಿಬಿರ ಏರ್ಪಡಿಸಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ರಕ್ತದ ಕೊರತೆಯಿಂದ ಯಾರೂ ಸಾಯಬಾರದು, ಒಂದು ಬಾರಿ ರಕ್ತ ನೀಡಿದರೆ ಮೂರು ಜನರ ಪ್ರಾಣ ಉಳಿಸಬಹುದು ಎಂದು ಸಲಹೆ ನೀಡಿದರು. ರಕ್ತ ಇಲ್ಲದೇ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸ್ವಯಂಪ್ರೇರಿತವಾಗಿ ರಕ್ತ ಕೊಡುವುದರ ಜೊತೆಗೆ ಮತ್ತೊಬ್ಬರಿಗೆ ಪ್ರೇರಣೆ ಕೊಡುವಂತೆ ಕರೆ ನೀಡಿದರು.
ಈ ವೇಳೆ, ರಕ್ತನಿಧಿ ವೈದ್ಯಾಧಿಕಾರಿ ನಾಗಲಕ್ಷ್ಮಿ, ಜಿಲ್ಲಾ ಏಡ್ಸ್ ಮತ್ತು ಕ್ಷಯ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಆರಾಧ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಖಜಾಂಚಿ ಯು.ಜೆ. ಮಲ್ಲಿಕಾರ್ಜುನ್, ಜಿಲ್ಲಾ ಸಂಯೋಜಕ ಕೃಷ್ಣಪ್ಪ, ಸರಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಸಿ.ಕೆ. ರವಿಶಂಕರ್, ಎನ್.ಎಸ್.ಎಸ್. ಅಧಿಕಾರಿ ಡಾ. ಎಲ್. ತಿಮ್ಮೇಶ್ ಇತರರು ಪಾಲ್ಗೊಂಡಿದ್ದರು.