ಹಾಸನ : ಬಿ.ಎಸ್.ಯಡಿಯೂರಪ್ಪ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಪ್ ಅವರಿಗೆ ಹಾಸನದ ಅರಸೀಕೆರೆ ವಿಧನಾಸಭಾ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದೆ. ಇವರ ಬದಲಾಗಿ ಬಿಜೆಪಿ ಹೈಕಮಾಂಡ್ ಜಿ.ವಿ.ಬಸವರಾಜ್ ಅವರಿಗೆ ಮಣೆ ಹಾಕಿದೆ. ಹೀಗಾಗಿ ಇಂದು ಎನ್.ಆರ್.ಸಂತೋಷ್ ಬೆಂಬಲಿಗರು ಬಿಜೆಪಿ ಫ್ಲೆಕ್ಸ್ ಹರಿದು ಹಾಕಿದರು. ಪಕ್ಷದ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಅವರು, ಒಂದು ಪಕ್ಷದಿಂದ ಬಿ ಫಾರಂ ಮಾತ್ರ ಕೊಡಬಹುದು. ಆದರೆ ಅದಕ್ಕೆ ಬೆಂಬಲ ನೀಡಿ ಅರ್ಥ ಕೊಡುವವರು ಜನರು. ಆದ್ದರಿಂದ ನಾನು ನಿಮ್ಮ ಅಭಿಪ್ರಾಯ ಕೇಳುತ್ತಿದ್ದೇನೆ. ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ. ಸ್ವತಂತ್ರ್ಯವಾಗಿ ಸ್ಪರ್ಧಿಸಬೇಕೇ ಅಥವಾ ಜೆಡಿಎಸ್ಗೆ ಸೇರ್ಪಡೆಗೊಳ್ಳಬೇಕೇ ಎಂಬುದರ ಬಗ್ಗೆ ಶೀಘ್ರವೇ ತಿಳಿಸುತ್ತೇನೆ. ಆದರೆ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ.
ಅರಸೀಕೆರೆಯಲ್ಲಿ ಬಿಜೆಪಿಯನ್ನು ಹುಡುಕಿ ನೋಡ್ಬೇಕಿತ್ತು. ಅಂತಹ ಪರಿಸ್ಥಿತಿಯಲ್ಲಿದ್ದ ಕ್ಷೇತ್ರವನ್ನು ಇವತ್ತು ಬಿಜೆಪಿ ಎಂದರೇನು ಅಂತ ತೋರಿಸ್ಕೊಟ್ಟಿದ್ದೇನೆ. ಹಳ್ಳಿಹಳ್ಳಿ ಸುತ್ತಿ ಪಕ್ಷ ಸಂಘಟನೆ ಮಾಡಿದ್ದೇನೆ. ಅಂತಹ ಕೆಲಸ ಮಾಡಿದ ನನಗೆ ಟಿಕೆಟ್ ನಿರಾಕರಣೆ ಮಾಡಿರೋದು ಮನಸ್ಸಿಗೆ ನೋವಾಗಿದೆ. ಪಕ್ಷವನ್ನು ತಳಮಟ್ಟಕ್ಕೆ ಇಟ್ಟಿದ್ರಲ್ಲ, ಇವತ್ತು ಅಂತಹ ವ್ಯಕ್ತಿಗಳಿಗೆ ಟಿಕೆಟ್ ನೀಡಲಾಗಿದೆ. ಇದು ನನ್ನಂತಹ ಪ್ರಾಮಾಣಿಕ ವ್ಯಕ್ತಿಗೆ ಮಾಡಿದ ಅಪಮಾನ ಮತ್ತು ದ್ರೋಹ ಎಂದರು.
ಮತ್ತೆ ಬಿಜೆಪಿ ಕಡೆ ಮುಖ ಮಾಡುವ ವ್ಯಕ್ತಿ ನಾನಲ್ಲ. ನನಗೆ ನನ್ನ ಕೈ ಹಿಡಿದ ಮತದಾರರೇ ಮುಖ್ಯ. ಹಾಗಾಗಿ ನಿಮ್ಮ ಬಳಿ ಬಂದಿದ್ದೇನೆ. ನೀವು ಯಾವ ತೀರ್ಮಾನ ಹೇಳುತ್ತೀರೋ ಆ ತೀರ್ಮಾನಕ್ಕೆ ನಾನು ಬದ್ಧ. ಇವತ್ತು ನಾನು ಮತ್ತು ನನ್ನ ಕುಟುಂಬ ನಿಮ್ಮೆದುರಿಗೆ ಬಂದಿದ್ದೇವೆ. ದಯಮಾಡಿ ನನ್ನನ್ನ ಕೈ ಬಿಡಬೇಡಿ ಅಂತ ವೇದಿಕೆ ಮೇಲೆ ಕಣ್ಣೀರಿಡುತ್ತಾ, ಕುಟುಂಬ ಹಾಗೂ ಬಾಣಂತಿಯ ಸಮ್ಮುಖದಲ್ಲಿ ಮತ ಕೇಳಿದರು.
ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ತಮ್ಮ ಪೇಸಿಎಂ ಬಿರುದನ್ನು ಪದೇ ಪದೆ ನಿರೂಪಿಸುತ್ತಿದ್ದಾರೆ: ರಮೇಶ್ ಬಾಬು ಆರೋಪ