ಹಾಸನ: ತಾಲೂಕಿನ ಹೂವಿನಹಳ್ಳಿ ಕಾವಲು ಬಳಿ ವಿದ್ಯುತ್ ಪ್ರಸರಣ ನಿಗಮ ನೌಕರನಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಅರೆಕಲ್ಲು ಹೊಸಹಳ್ಳಿ ಗ್ರಾಮದ ಸಂತೋಷ್ (36) ಕೊಲೆಯಾದ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೂವಿನಹಳ್ಳಿ ಕಾವಲು ಗ್ರಾಮದ ಹೊಲದಲ್ಲಿ ಶವ ಪತ್ತೆಯಾಗಿದ್ದು, ಕಳೆದ ರಾತ್ರಿ ಕೆಲವು ಸ್ನೇಹಿತರು ಪಾರ್ಟಿ ಮಾಡಿದ್ದು, ನಂತರ ಸಂತೋಷನನ್ನು ಕೊಲೆ ಮಾಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಶವದ ಪಕ್ಕದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು ಹಾಗೂ ಊಟವನ್ನ ತಂದಿದ್ದ ಪಾಕೆಟ್ಗಳು ಪಾರ್ಟಿ ಮಾಡಿರುವುದಕ್ಕೆ ಸಾಕ್ಷಿಯಂತಿವೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹಾಸನದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಸ್ಥಳದಲ್ಲಿ ದೊರೆತಿದೆ ಕೆಲವು ಅಂಶಗಳು ದೊರೆತಿದ್ದು, ಇದರ ಆಧಾರದ ಮೇಲೆ ತನಿಖೆ ಮಾಡಲಾಗುವುದು. ಈಗಾಗಲೇ ಎರಡು ತಂಡಗಳ ರಚನೆ ಮಾಡಿದ್ದು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ಗೆ ವಿನಾಯಿತಿ ನೀಡಿದ ಜೋಧ್ಪುರ ಕೋರ್ಟ್
ಸಂತೋಷ್ ತಂದೆ ವಿದ್ಯುತ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೆಲ ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಬಳಿಕ ಅನುಕಂಪದ ಆಧಾರದ ಮೇಲೆ ವಿದ್ಯುತ್ ಇಲಾಖೆಯಲ್ಲಿಯೇ ಸಂತೋಷ ಅವರಿಗೆ ನೌಕರಿ ಸಿಕ್ಕಿತ್ತು.