ಹಾಸನ: ಸಾಲ ಕೊಡಲಿಲ್ಲ ಎಂದು 55 ವರ್ಷದ ಮಹಿಳೆಯನ್ನು ಅಪಹರಿಸಿ ಕೊಲೆ ಮಾಡಿ ಮೈಮೇಲಿದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಅರಕಲಗೂಡು ಪೊಲೀಸರು ಯಶಸ್ವಿಯಾಗಿದ್ದು, 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಕಲಗೂಡು ತಾಲೂಕು ಚಿಕ್ಕಬೆಮ್ಮತ್ತಿ ಗ್ರಾಮದ ಸತೀಶ್ (39), ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಬಣ್ಣದಪುರ ಗ್ರಾಮದ ಗುರುಸ್ವಾಮಿ (29) ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ತೊರೆನೂರು ಗ್ರಾಮದ ಟಿ.ಎಂ.ಮಧು (22) ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದ ಕಾಳಮ್ಮ (55), 2019ರ ಅ. 27ರಂದು ಕಾಣೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಬಡ್ಡಿ ವ್ಯವಹಾರ ಮಾಡುತ್ತಿದ್ದ ಕಾಳಮ್ಮ ಅವರ ಸೊಸೆ ಗೀತಾ ಮೂಲಕ ಚಿಕ್ಕಬೆಮ್ಮತ್ತಿ ಗ್ರಾಮದ ಸತೀಶ್ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು. ಪ್ರಕರಣದ ಬೆನ್ನು ಹತ್ತಿದಾಗ, ಸತೀಶ್ ತನ್ನ ಅಕ್ಕನ ಮಗ ಗುರುಸ್ವಾಮಿಗೆ ಹಣದ ಅವಶ್ಯಕತೆ ಇರುವುದಿಂದ ಕಾಳಮ್ಮಗೆ 1 ಲಕ್ಷ ರೂ. ಸಾಲ ಕೇಳಿದ್ದ. ಹಣ ಕೊಡಲು ಆಕೆ ಒಪ್ಪಲಿಲ್ಲ. ಆಗ ಸತೀಶ್, ಗುರುಸ್ವಾಮಿ ಇಬ್ಬರು ಸೇರಿ ಕಾಳಮ್ಮ ಧರಿಸಿದ್ದ ಆಭರಣ ದೋಚುವ ಸಲುವಾಗಿ ಕೊಲೆ ಮಾಡಲು ಯೋಜಿಸಿದ್ದರು ಎಂದು ತಿಳಿದು ಬಂದಿದೆ.
ಅಮಾವಾಸ್ಯೆ ದಿನದಂದು ಶ್ರೀರಂಗಪಟ್ಟಣದ ಸಮೀಪದ ಆರತಿ ಉಕ್ಕಡ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಸತೀಶ್‌ನ ಸ್ನೇಹಿತ ತೊರೆನೂರು ಗ್ರಾಮದ ಮಧು ಸಹಾಯ ಪಡೆದು ಮೂವರು ಇಂಡಿಕಾ ಕಾರಿನಲ್ಲಿ ಕಾಳಮ್ಮನವರನ್ನು ಕೂರಿಸಿಕೊಂಡು ಹೊರಟರು. ಮಾರ್ಗ ಮಧ್ಯೆ ಗುರುಸ್ವಾಮಿ ವಿಷದ ಮಾತ್ರೆಗಳನ್ನು ಹಾಲಿನ ಬಾಟಲಿಗೆ ಹಾಕಿ ಕಾಳಮ್ಮನವರಿಗೆ ಕುಡಿಸಿದ. ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿ, ಮೈಮೇಲಿದ್ದ ಆಭರಣಗಳನ್ನು ದೋಚಿ ಮೃತದೇಹವನ್ನು ಕೇರಳಾಪುರ ಕಡೆಗೆ ಹೋಗುವ ರಸ್ತೆ ಬದಿ ಕಾವೇರಿ ನದಿಗೆ ಬಿಸಾಡಿದ್ದರು ಎಂಬ ಮಾಹಿತಿಯನ್ನು ಆರೋಪಿಗಳು ನೀಡಿದ್ದಾರೆ.
ಆರೋಪಿಗಳಿಂದ 4 ಚಿನ್ನದ ಬಳೆ, ಒಂದು ಚಿನ್ನದ ಸರ, ಒಂದು ಜೊತೆ ಚಿನ್ನದ ಓಲೆ ಮತ್ತು ಪ್ಲೇಟ್, ಒಂದು ಜೊತೆ ಚಿನ್ನದ ಮಾಟಿ ಸೇರಿ 110 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದರು. ಆರೋಪಿಗಳ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಅರಕಲಗೂಡು ಸಿಪಿಐ ಎಂ.ಕೆ. ದೀಪಕ್, ಪಿಎಸ್‌ಐಗಳಾದ ವಿಜಯಕೃಷ್ಣ, ಸುರೇಶ್, ಕಾನ್‌ಸ್ಟೇಬಲ್‌ಗಳಾದ ಬಸವರಾಜ್, ಬಸಪ್ಪ, ಮಹೇಶ್, ಸುನಿಲ್, ಬಸವರಾಜ್ ಮಾಸಗಟ್ಟಿ, ಸಣ್ಣೇಗೌಡ, ಸುರೇಶ್, ದಿನೇಶ್ ಅವರಿಗೆ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ವಿಷೇಷ ಬಹುಮಾನ ನೀಡಿ ಅಭಿನಂದಿಸಿದರು.