ಹಾಸನ: ಹತ್ತಾನೆ ಬೇಕಾದ್ರು ಸಾಕ್ತೀನಿ. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ ಏನು ಮಾಡೋಣ? ಮಾಜಿ ಸಚಿವ ಹೆಚ್. ಡಿ.ರೇವಣ್ಣ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಮದುವೆ ಬಗ್ಗೆ ತಮಾಷೆ ಮಾಡಿದರು.
ಜಿಲ್ಲೆಯ ಸಕಲೇಶಪುರದ ಪುರಭವನದಲ್ಲಿ ಆನೆ ಸಮಸ್ಯೆ ಬಗ್ಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಸಚಿವರುಗಳಾದ ಅರವಿಂದ ಲಿಂಬಾವಳಿ, ಗೋಪಾಲಯ್ಯ ಸೇರಿದಂತೆ ಶಾಸಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಈ ವೇಳೆ ಮಾಜಿ ಶಾಸಕ ವಿಶ್ವನಾಥ್ ಅವರು, ಹೊಳೆನರಸೀಪುರ ಕ್ಷೇತ್ರಕ್ಕೆ ಹತ್ತು ಆನೆ ಬಿಟ್ರೆ ಸಮಸ್ಯೆ ಬಗೆಹರಿಯುತ್ತೆ ಎಂದು ತಮಾಷೆ ಮಾಡಿದ್ರು. ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರಜ್ವಲ್ ರೇವಣ್ಣ, ಹತ್ತು ಆನೆ ಬೇಕಾದ್ರು ಸಾಕ್ತೀನಿ. ನಮ್ಮಪ್ಪ ಮದುವೆ ಆಗು ಅಂತಿದ್ದಾರೆ ಏನು ಮಾಡೋದು ಎಂದು ತಮಾಷೆ ಮಾಡಿದ್ರು.
ಶಾಸಕ ಪ್ರೀತಂಗೌಡ ವಿರುದ್ಧ ವಾಗ್ದಾಳಿ : ಆನೆಗಳ ಹಾವಳಿ ತಡೆಗಟ್ಟುವ ಸಂಬಂಧ ಸಕಲೇಶಪುರದಲ್ಲಿ ಸಚಿವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಸಭೆ ನಡೆಯುತ್ತಿತ್ತು. ಈ ಹಿಂದೆ ಕೇಂದ್ರ ಬಜೆಟ್‌ನಲ್ಲಿ ಹಾಸನಕ್ಕೆ ಕೊಡುಗೆಯೇನು? ಎಂಬ ಬಗ್ಗೆ ಮಾತನಾಡಿದ್ದ ಶಾಸಕ ಪ್ರೀತಂಗೌಡ, ಹಾಸನ ಸಂಸದರು ಸರಿಯಾಗಿ ಸಂಸತ್ತಿಗೆ ಹೋಗುತ್ತಿಲ್ಲ. ಅವರು ಜಿಲ್ಲೆಯ ಬಗ್ಗೆ ಕೇಂದ್ರದ ಗಮನ ಸೆಳೆದಿಲ್ಲ ಎಂದು ಟೀಕಿಸಿದ್ರು.
ಇದಕ್ಕೆ ಪ್ರತಿಯಾಗಿ ಇಂದು ಸಭೆಯಲ್ಲಿ ಪ್ರತ್ಯುತ್ತರ ನೀಡಿದ ಸಂಸದ ಪ್ರಜ್ವಲ್ ರೇವಣ್ಣ, ಯಾರೋ ಮೂರ್ಖರು ಹೇಳ್ತಾರೆ, ಪ್ರಜ್ವಲ್ ರೇವಣ್ಣ ಸರಿಯಾಗಿ ಮಾತಾಡಿಲ್ಲ. ಅದಕ್ಕೆ, ಅನುದಾನ ಬಂದಿಲ್ಲ ಎಂದು. ಎಂಪಿಯಾಗಿ ನಾವು ಮನವಿ ಮಾಡಿ ಧ್ವನಿ ಎತ್ತಬಹುದು. ಸಮಸ್ಯೆ ಬಗ್ಗೆ ಬಿಂಬಿಸಬಹುದು. ಆದರೆ, ರಾಜ್ಯ ಸರ್ಕಾರ ಪ್ರಪೋಸಲ್ ಕಳುಹಿಸದೆ ಕೆಲಸ ಆಗಲ್ಲ. ಇದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಸಚಿವ ಅರವಿಂದ ಲಿಂಬಾವಳಿ, ಕೆ.ಗೋಪಾಲಯ್ಯ, ಸ್ಥಳೀಯ ಶಾಸಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.