ಹಾಸನ : ಜಿಲ್ಲೆಯ ಜನರ ಸಮಸ್ಯೆ ಆಲಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ನಗರದ ಗೋಮತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಸೋತಿರಬಹುದು. ಕಾರ್ಯಕರ್ತರು ಸೋತಿಲ್ಲ ಮತ್ತೆ ಜೆಡಿಎಸ್ ಬಾವುಟ ಹಾರಿಸಲಾಗುವುದು. ಪಕ್ಷ ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯದೆ ತಪ್ಪು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪುಗಳಾಗದಂತೆ ಎಚ್ಚರವಹಿಸಲಾಗುವುದು. ರಾಜ್ಯ ಘಟಕದ ಅಧ್ಯಕ್ಷರ ಸಲಹೆಯಂತೆ ಮಹಿಳಾ, ಯುವ, ನಗರ ಘಟಕ ರಚಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಕಾರ್ಯಕರ್ತರ ಸಭೆ ಮಾಡಬೇಕು ಎಂದು ಹೇಳಿದರು.
ಶಾಸಕ ಹೆಚ್.ಡಿ. ರೇವಣ್ಣ ಮಾತನಾಡಿ, ಸಮ್ಮಿಶ್ರ ಸರ್ಕಾರ ಹದಿನಾಲ್ಕು ತಿಂಗಳಲ್ಲಿ ಏನು ಮಾಡಿದೆ ಎನ್ನುವುದು ಚರ್ಚೆಯಾಗಲಿ. 1,19,840 ಕುಟುಂಬಕ್ಕೆ ಒಂದೂವರೆ ಸಾವಿರ ಕೋಟಿ ಸಾಲ ಮನ್ನಾ ಆಗಿದೆ. ಯಡಿಯೂರಪ್ಪ ಬಂದು ಒಂದೂವರೆ ತಿಂಗಳಾಯಿತು. ಜಿಲ್ಲಾ ಬ್ಯಾಂಕ್‌ಗೆ ಬರಬೇಕಾಗಿದ್ದ ₹ 115 ಕೋಟಿ ಬಿಡುಗಡೆ ಮಾಡಿಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
‘ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರಾಗಿರುವ ಅಭಿವೃದ್ಧಿ ಕಾಮಗಾರಿ ಹೇಗೆ ನಿಲ್ಲಿಸುತ್ತಾರೆ ನೋಡುತ್ತೇವೆ. ಹೆದರಿ ಮನೆಗೆ ಹೋಗುವುದಿಲ್ಲ. ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಸೆ. 12ರಂದು ಬಿಡುಗಡೆ ಮಾಡಲಾಗುವುದು. ಕಟ್ಟಾಯಕ್ಕೆ ಸಮುದಾಯ ಆಸ್ಪತ್ರೆ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಮಾತನಾಡಿ, ಸಮ್ಮಿಶ್ರ ಸರ್ಕಾರ ಹದಿನಾಲ್ಕು ತಿಂಗಳಲ್ಲಿ ಜನಪರ ಆಡಳಿತ ನೀಡಿದೆ. ಪಕ್ಷ ಬಲಪಡಿಸಲು ಪ್ರತಿ ತಾಲೂಕಿನಲ್ಲಿ 10 ರಿಂದ 15 ಘಟಕ ರಚಿಸಲಾಗುವುದು. ಪ್ರತಿ ಘಟಕದಲ್ಲಿ 25 ಜನರು ಇರುತ್ತಾರೆ. ಎಲ್ಲಾ ವರ್ಗದವರಿಗೂ ಆದ್ಯತೆ ನೀಡಲಾಗುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿ ನಿಲ್ಲಿಸಿದರೆ ಹೋರಾಟ ಮಾಡಲಾಗುವುದು ಎಂದು ಬಿಜೆಪಿಗೆ ಎಚ್ಚರಿಸಿದರು.
ತಾಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ಮುಖಂಡರಾದ ಕರೀಂಗೌಡ, ದೊಡ್ಡೇಗೌಡ, ಚನ್ನವೀರಪ್ಪ, ಅಣ್ಣಪ್ಪಶೆಟ್ಟಿ, ರಾಜೇಗೌಡ, ಪಟೇಲ್ ಶಿವರಾಂ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸ್ವರೂಪ್ ಇದ್ದರು.
ಯಡಿಯೂರಪ್ಪ ಎಲ್ಲಿದ್ದೀರಪ್ಪಾ?
‘ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಾವಿರಾರು ಬದುಕು ಬೀದಿಗೆ ಬಂದಿದೆ. ಗಂಜಿ ಕೇಂದ್ರದಲ್ಲಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಅವರಿಗೆ ಪರಿಹಾರ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ಜನರ ಬಗ್ಗೆ ತಲೆ ಕೆಡಿಸಿಕೊಳ್ಳದ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಿದ್ದೀರಪ್ಪಾ’ ಎಂದು ಶಾಸಕ ಲಿಂಗೇಶ್ ಪ್ರಶ್ನೆ ಮಾಡಿದರು.