ಹಾಸನ: ಪ್ರತಿ ತಿಂಗಳು ಮದ್ಯದಂಗಡಿ ಮಾಲೀಕರು ಅಬಕಾರಿ ಇಲಾಖೆಗೆ "35 ಸಾವಿರ ಲಂಚ" ಕೊಡಬೇಕಾ ಎಂದು ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಗಂಭೀರವಾಗಿ ಆರೋಪ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಅಕ್ರಮ ಮದ್ಯ ಮತ್ತು ಲಂಚ ಪಡೆಯುತ್ತಿರುವ ಬಗ್ಗೆ ಗಂಭೀರವಾಗಿ ಅಬಕಾರಿ ಇಲಾಖೆ ಮೇಲೆ ಆರೋಪ ಮಾಡಿದ ಪ್ರಜ್ವಲ್ ರೇವಣ್ಣ 'ಪ್ರತಿ ತಿಂಗಳು 35 ಸಾವಿರ ಲಂಚ ತಗೋತಿರಲ್ಲ, ಅದನ್ನು ಕಡಿಮೆ ಮಾಡಿಸಿ ಅಂತ ಲಿಕ್ಕರ್ ಅಸೋಸಿಯೇಷನ್ ಅವರು ನನಗೆ ಒತ್ತಡ ಹಾಕುತ್ತಿದ್ದಾರೆ ಏನಿದು ನಿಮ್ಮದು ಇಲಾಖೆ..? ತಿಂಗಳಲ್ಲಿ ನಾಲ್ಕು ಪ್ರಕರಣ ದಾಖಲು ಮಾಡಿದ್ರೆ ಸಾಕಾ? ಪೊಲೀಸ್ ಇಲಾಖೆ ಪ್ರತಿ ತಿಂಗಳು 30ಕ್ಕೂ ಹೆಚ್ಚು ಪ್ರಕರಣವನ್ನು ದಾಖಲು ಮಾಡುತ್ತದೆ. ಅಂದರೆ ನಿಮ್ಮ ಕೆಲಸವನ್ನು ಪೊಲೀಸ್ ಇಲಾಖೆ ಯಾಕೆ ಮಾಡಬೇಕು? ನಿಮಗೆ ಸಹಾಯಕ್ಕೆ ಮಾತ್ರ ಅವರು ಇರೋದು ನಿಮ್ಮ ಕೆಲಸವನ್ನು ಅವರೇ ಮಾಡೋಕೆ ಅಲ್ಲ ಇರೋದು' ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಇನ್ನು 'ಜಿಲ್ಲೆಯಲ್ಲಿ ಸಾಕಷ್ಟು ಕೊಲೆ ಪ್ರಕರಣಗಳು ನಡೆಯುತ್ತಿವೆ. ಅದರಲ್ಲಿ ಬಹುತೇಕ ಕುಡಿದ ಅಮಲಿನಲ್ಲಿಯೇ ನಡೆಯುತ್ತಿರುವುದು ಬಹಳ ನೋವಿನ ಸಂಗತಿ. ಇದರ ಬಗ್ಗೆ ನಾನು ಹೇಳುವುದಕ್ಕಿಂತ ಸ್ವತಃ ಎಸ್ಪಿ ಅವರೇ ಹೇಳುತ್ತಾರೆ' ಎಂದು ಕಿಡಿಕಾರಿದರು. ಇದಕ್ಕೆ ಉತ್ತರಿಸಿದ ಎಸ್ ಪಿ ಹರಿರಾಮ ಶಂಕರ್ 'ನಾನು ನೋಡಿದ ಬಹುತೇಕ ಪ್ರಕರಣಗಳು ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯನ್ನು ಕೊಲೆ ಮಾಡಿರುವುದು ಅಥವಾ ಮತ್ಯಾವುದೋ ವಿಚಾರಕ್ಕೆ ಕೊಲೆ ಮಾಡಿರುವುದು ಕಂಡುಬಂದಿದೆ. ಆದರೆ, ಇದುವರೆಗೂ ಸುಮಾರು 37 ಕೊಲೆ ಪ್ರಕರಣಗಳು ನಮ್ಮಲ್ಲಿ ದಾಖಲಾಗಿದ್ದು, ಈ ವರ್ಷ ಕೊಲೆ ಪ್ರಕರಣ ದರ ಕಡಿಮೆಯಾಗಿದೆ ಎಂದು ಹೇಳಿದರು.
ಎತ್ತಿನ ಹೊಳೆ ಯೋಜನೆ ಪರಿಶೀಲನೆಗೆ ಹಾಸನಕ್ಕೆ ಭೇಟಿ ಕೊಟ್ಟಿದ್ದ ಡಿಕೆಶಿ: ಹಾಸನದ ಸಕಲೇಶಪುರದಲ್ಲಿ ಎತ್ತಿನ ಹೊಳೆ ಕಾಮಗಾರಿ ನಡೆಯುತ್ತಿದೆ. ಇದನ್ನು ಪರಿಶೀಲಿಸಲು ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಮಿತಿ ನಿಗದಿ ಮಾಡಿ 100 ದಿನದಲ್ಲಿ ನೀರು ಹರಿಸುವಂತೆ ಸೂಚನೆ ನೀಡಿದ್ದರು. 100 ದಿನದಲ್ಲಿ ನೀರನ್ನು ಪಂಪ್ ಔಟ್ ಮಾಡಬೇಕು. ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೇರಿದಂತೆ ಎಲ್ಲರಿಗೆ ಒಂದು ಟೈಂ ಬಾಂಡ್ ಕೊಟ್ಟಿದ್ದೇನಿ. ನೀರನ್ನು ಪಂಪ್ ಮಾಡಲು ಅಧಿಕಾರಿಗಳಿಗೂ ಜವಾಬ್ದಾರಿ ನೀಡಿದ್ದೇನೆ ಎಂದಿದ್ದರು.
ಇದನ್ನೂ ಓದಿ: ಕೃಷಿ ಸಚಿವರ ವಿರುದ್ದ ರಾಜ್ಯಪಾಲರಿಗೆ 'ಲಂಚ ಪತ್ರ': ಇಬ್ಬರು ಕೃಷಿ ಅಧಿಕಾರಿಗಳು 3 ದಿನ ಪೊಲೀಸ್ ಕಸ್ಟಡಿಗೆ