ಹಾಸನ/ (ಹಳೇಬೀಡು): ಕುಮಾರಸ್ವಾಮಿ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ನಮ್ಮ ಯೋಜನೆಗಳು ಎಂದು ಹೇಳಿಕೊಂಡು ಬಿಜೆಪಿ ಸರ್ಕಾರ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ.
12 ವರ್ಷಗಳ ಬಳಿಕ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡಿನ ದ್ವಾರಸಮುದ್ರ ಕೆರೆ ತುಂಬಿದೆ. ಈ ಹಿನ್ನೆಲೆ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನೇತೃತ್ವದಲ್ಲಿ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಹಿಂದೆ ಬಿಡುಗಡೆಯಾದ ಅನುದಾನವನ್ನು ತಡೆಹಿಡಿದು ದ್ವೇಷದ ರಾಜಕಾರಣ ಮಾಡುತ್ತಿರುವ ನಿಮಗೆ ಮುಂದಿನ ದಿನದಲ್ಲಿ ಜಿಲ್ಲೆಯ ಜನತೆ ತಕ್ಕ ಉತ್ತರ ನೀಡುತ್ತಾರೆ. ಯಗಚಿ ಅಣೆಕಟ್ಟಿನಿಂದ ಹಳೇಬೀಡು, ಮಾದೀಹಳ್ಳಿ ಕೆರೆಗಳಿಗೆ ನೀರು ಹರಿಸಲು ದೇವೇಗೌಡರ ಕುಟುಂಬ ಅಡ್ಡಗಾಲು ಹಾಕುತ್ತಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ಮಾಡಿದ್ದೀರಿ.
ಹಳೇಬೀಡು ಮಾದಿಹಳ್ಳಿ ಕೆರೆಗೆ ರಣಘಟ್ಟ ಏತನೀರಾವರಿ ಯೋಜನೆ ಮೂಲಕ ನೀರು ಹರಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 100 ಕೋಟಿ ಅನುದಾನ ಮೀಸಲಿಟ್ಟು, ಅನುಮೊದನೆ ನೀಡಿದ್ದರು. ಆದರೆ ಈಗಿನ ಬಿಜೆಪಿ ಸರ್ಕಾರ ಮಾಡಿದ ಮೊದಲ ಕೆಲಸ ಅದನ್ನ ತಡೆ ಹಿಡಿದಿರೋದು. ಇದು ಇವರು ಮಾಡುತ್ತಿರುವ ಅಭಿವೃದ್ಧಿ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.