ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ-ಮೈಸೂರು ರಸ್ತೆಯ ಹೊರವಲಯದಲ್ಲಿ ನಿರಾಶ್ರಿತರಿಗೆ ಆಶ್ರಮ ನೆರಳಾಗಿದೆ. ಮಾತೃಭೂಮಿ ಎಂಬ ವೃದ್ಧಾಶ್ರಮ ಹನ್ನೆರಡು ವರ್ಷಗಳ ಹಿಂದೆ ಸ್ಥಾಪನೆ ಮಾಡಲಾಯಿತು. ಈ ವೃದ್ಧಾಶ್ರಮದ ಸಂಸ್ಥಾಪಕಿ ವಿಜಯ ನಾಗಣ್ಣ. ವಿಜಯ ಮತ್ತು ನಾಗಣ್ಣ ದಂಪತಿ ಈ ಆಶ್ರಮವನ್ನ ನೋಡಿಕೊಳ್ಳುತ್ತಿದ್ದಾರೆ.
ನಾಗಣ್ಣ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ವಿಜಯ ವೃದ್ಧಾಶ್ರಮವನ್ನು ನೋಡಿಕೊಳ್ಳುತ್ತಿದ್ದಾರೆ. ರಜೆ ದಿನಗಳಲ್ಲಿ ನಾಗಣ್ಣನು ಸಹ ಆಶ್ರಮದಲ್ಲಿ ಕೆಲಸ ಮಾಡುತ್ತಾರೆ. ಅವರ ಮಗ ಮತ್ತು ಸೊಸೆಯ ಸಹಕಾರವೂ ಈ ಆಶ್ರಮಕ್ಕೆ ಇದೆ. ಒಬ್ಬ ಸದಸ್ಯನಿಂದ ಪ್ರಾರಂಭವಾದ ಆಶ್ರಮ ಇವತ್ತು 70ಕ್ಕೂ ಅಧಿಕ ನಿರಾಶ್ರಿತರಿಗೆ ಸೂರಾಗಿದೆ.
ಇಲ್ಲಿ ಬರುವ ನಿರಾಶ್ರಿತರಿಗೆ ಯಾವುದೇ ಶುಲ್ಕವಿಲ್ಲ. ಊಟ, ತಿಂಡಿ, ವಸತಿ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಈ ಆಶ್ರಮವೇ ನೋಡಿಕೊಳ್ಳುತ್ತದೆ. ಅಲ್ಲದೆ ಕೆಲವು ಅಂಗವಿಕಲ ಸದಸ್ಯರುಗಳ ದೈನಂದಿನ ನಿತ್ಯಕರ್ಮಗಳನ್ನು ಕೂಡ ಆಶ್ರಮದ ಸದಸ್ಯರೇ ಮಾಡುತ್ತಾರೆ. ಹನ್ನೆರಡು ವರ್ಷಗಳ ಹಿಂದೆ ಪ್ರಾರಂಭವಾಗಿರೋ ಈ ವೃದ್ಧಾಶ್ರಮದಲ್ಲಿ ಊಟ, ವಸತಿ ಮತ್ತು ಬಟ್ಟೆ ನೀಡುವ ಜೊತೆಗೆ ಪ್ರವೇಶವೂ ಉಚಿತ.
ನಾಗಣ್ಣರಿಗೆ ಬರೋ ಸಂಬಳದಲ್ಲಿ ಶೇ.60ರಷ್ಟು ಹಣವನ್ನು ವೃದ್ಧಾಶ್ರಮಕ್ಕಾಗಿ ಮೀಸಲಿಡುತ್ತಿದ್ದಾರೆ. ಹತ್ತಿರದ ಸಂಘ-ಸಂಸ್ಥೆಗಳು ಅವರಿಂದಾದ ಸಹಕಾರ ನೀಡಿದ್ದಾರೆ. ಆದರೆ, ಈವರೆಗೂ ಸರ್ಕಾರದಿಂದಾಗಲೀ, ಜನಪ್ರತಿನಿಧಿಗಳಿಂದಾಗಲಿ ಯಾವುದೇ ರೀತಿಯ ಅನುದಾನ ಬಂದಿಲ್ಲ.
ಈವರೆಗೂ ಸುಮಾರು 280 ವೃದ್ಧರ ಅಂತ್ಯಸಂಸ್ಕಾರವನ್ನೂ ಈ ದಂಪತಿಯೇ ಮಾಡಿದೆ. ಈ ಆಶ್ರಮ ಮುಂದೆ ಕೂಡ ಹಿರಿಯ ಜೀವಗಳಿಗೆ ಆಸರೆಯಾಗಲಿ ಅನ್ನೋದು ಎಲ್ಲರ ಆಶಯ. ಆದರೆ, ಇಂಥಾ ಒಳ್ಳೆ ಕೆಲಸ ಮಾಡೋ ಆಶ್ರಮಕ್ಕೆ ಸರ್ಕಾರ ಮತ್ತು ದಾನಿಗಳು ಸಹಾಯಕ್ಕೆ ಮುಂದಾಗಬೇಕಿದೆ.
ವಿಜಯ ನಾಗಣ್ಣ ಈಗ ಆಶ್ರಮದ ನೊಂದ ಜೀವಿಗಳಿಗೆ ಮಾತೃಸ್ವರೂಪಿ, ಅಮ್ಮ ಎಂಬ ಮಮತೆಯ ಮಹಾಪೂರವನ್ನೇ ಹಿರಿಯ ಜೀವಗಳಿಗೆ ಸಮರ್ಪಣೆ ಮಾಡಿದ್ದಾರೆ. ಅವರ ನೋವುಗಳಿಗೆ ಸ್ಪಂದಿಸುತ್ತಾ ಅವರಿಗೊಂದು ಬದುಕು ನೀಡಿರುವ ಈ ಮಹಾತಾಯಿಗೆ ಅಮ್ಮನ ದಿನಾಚರಣೆಯ ಶುಭಾಶಯಗಳು.
ಇದನ್ನೂ ಓದಿ: ವಿದೇಶಿ, ದೇಶಿ ಹೂಡಿಕೆಯಲ್ಲಿ ಮುಂಚೂಣಿಯಲ್ಲಿರಲು ಸರ್ಕಾರ ಶ್ರಮಿಸುತ್ತಿದೆ: ಸಿಎಂ