ಹಾಸನ: ಬರೀ ರೇವಣ್ಣ, ಶಿವಲಿಂಗೇಗೌಡ ಮಾತನಾಡೋದಾದ್ರೆ ನಮ್ಮನ್ಯಾಕೆ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸ್ಗೆ ಕರೆಸಿದ್ರಿ? ಎಂದು ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ನಡೆಯಿತು.
ಮುಖ್ಯಮಂತ್ರಿಗಳ ಜೊತೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಗೋಪಾಲಯ್ಯ, ಜಿಲ್ಲೆಯ ಶಾಸಸಕರಾದ ರೇವಣ್ಣ, ಶಿವಲಿಂಗೇಗೌಡ, ಬಾಲಕೃಷ್ಣ, ಪ್ರೀತಂಗೌಡ, ಕುಮಾರಸ್ವಾಮಿ, ಲಿಂಗೇಶ್, ಎಂಎಲ್ಸಿ ಗೋಪಾಲಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.
ಹಾಸನ ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡುವಾಗ ಮುಖ್ಯಮಂತ್ರಿಗಳ ಜೊತೆ ಸಚಿವ ಗೋಪಾಲಯ್ಯ, ಶಾಸಕರಾದ ರೇವಣ್ಣ, ಶಿವಲಿಂಗೇಗೌಡರಿಗೆ ಮಾತನಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ತಮ್ಮ ಅಭಿಪ್ರಾಯ ಹೇಳಲು ಗೋಪಾಲಸ್ವಾಮಿ ಅವರಿಗೆ ಈ ವೇಳೆ ಅವಕಾಶ ಸಿಗಲಿಲ್ಲ. ಇದರಿಂದ ಕೆರಳಿದ ಅವರು, ನಾವೂ ಕೂಡ ಜನಪ್ರತಿನಿಧಿಗಳೇ. ನಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನ ನನ್ನ ಬಳಿಯೂ ಕಷ್ಟ ಹೇಳಿಕೊಂಡಿರುತ್ತಾರೆ. ಅವರ ಧ್ವನಿಯಾಗಿ ನಾವು ಮುಖ್ಯಮಂತ್ರಿಗಳ ಬಳಿ ಮಾತನಾಡಿ ಕೆಲಸ ಮಾಡಿಸಬೇಕಿದೆ. ಆದರೆ ನೀವು ನಿಮ್ಮ ಜೊತೆ ಆಪ್ತರಾಗಿರುವವರಿಗೆ ಮಾತ್ರ ಮಾತನಾಡಲು ಅವಕಾಶ ಮಾಡಿಕೊಟ್ಟು, ನಮ್ಮನ್ನು ನಿರ್ಲಕ್ಷಿಸಿದ್ರೆ ಹೇಗೆ? ಎಂದು ಗರಂ ಆದರು.
ನಾನು ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪಾರ್ಟಿಯಿಂದ ಆಯ್ಕೆಯಾದ ಎಂಎಲ್ಸಿ. ನನ್ನ ಜನರ ಕಷ್ಟಸುಖದ ಬಗ್ಗೆ ಸರ್ಕಾರದ ಗಮನ ಸೆಳೆಯೋದು ನನ್ನ ಕರ್ತವ್ಯ. ನೀವು ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಈ ಸಭೆಯಲ್ಲಿ ನಾನು ಇರುವುದಿಲ್ಲ ಎಂದು ಕೋಪಗೊಂಡು ಎದ್ದು ಹೊರನಡೆಯಲು ಮುಂದಾದರು.
ಇದನ್ನೂ ಓದಿ: '10 ರೂಪಾಯಿ ಡಾಕ್ಟರ್'... ಬಡವರ ಮನಗೆದ್ದಿರುವ ಗುರುವಾಯನಕೆರೆ ವೈದ್ಯ
ಈ ವೇಳೆ ಸಚಿವರು ಮತ್ತು ಗೋಪಾಲಸ್ವಾಮಿ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಸಚಿವರು, ಗೋಪಾಲಸ್ವಾಮಿ ಅವರಿಗೆ ಮುಖ್ಯಮಂತ್ರಿಗಳ ಜೊತೆ ವಿಸಿಯಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟು, ಗೊಂದಲಕ್ಕೆ ತೆರೆ ಎಳೆದರು.
ಈ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಗೋಪಾಲಸ್ವಾಮಿ, ಅಂತಿಮ ಹಂತದಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಇಲ್ಲಿಗೆ ಬಿಡೋಣ ಎಂದರು.
ವಿಡಿಯೋ ಕಾನ್ಪರೆನ್ಸ್ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕೇಂದ್ರ ಸರ್ಕಾರ ನೀಡುವ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯ. ಆದ್ರೆ ರಾಜ್ಯ ಮತ್ತು ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕಿದೆ. ಜೂ.7ರ ತನಕ ಲಾಕ್ ಡೌನ್ ಇದೆ. ಅಷ್ಟರೊಳಗೆ ಶಾಸಕರುಗಳ ಅಭಿಪ್ರಾಯ ಸಂಗ್ರಹಿಸಿ ಲಾಕ್‌ಡೌನ್ ಮುಂದುವರೆಸುವುದಾ..? ಅಥವಾ ಬೇಡವಾ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಸೋಂಕಿತರ ಸಾವು-ನೋವುಗಳನ್ನು ತಗ್ಗಿಸಲು ಜಿಲ್ಲಾಡಳಿತ ಮತ್ತು ಸರ್ಕಾರ ಪ್ರಯತ್ನ ಮಾಡುತ್ತಿದೆ. ಜಿಲ್ಲೆಯ ಎಲ್ಲಾ ಶಾಸಕರುಗಳು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೋಂ ಕ್ವಾರೆಂಟೈನ್ ಬೇಡ ಸಿಸಿಸಿ ಸೋಂಕಿತರನ್ನು ಕರೆತಂದು ಚಿಕಿತ್ಸೆ ನೀಡಬೇಕು ಎಂದಿದ್ದರು. ಅದಕ್ಕೂ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಚರ್ಚಿಸಿ ಅಸ್ತು ಎಂದಿದ್ದಾರೆ. ಜಿಲ್ಲೆಯಲ್ಲಿ ಆಮ್ಲಜನಕದ ಪ್ಲಾಂಟ್ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸಕಲೇಶಪುರ ಮತ್ತು ಚನ್ನರಾಯಟಪಟ್ಟಣದಲ್ಲಿ ಕೇಂದ್ರದಿಂದಲೇ ಪ್ಲಾಂಟ್ ನಿರ್ಮಾಣಕ್ಕೆ ಅಸ್ತು ಎಂದಿದ್ದಾರೆ. ಇನ್ನುಳಿದ ತಾಲೂಕಿನಲ್ಲಿ ರಾಜ್ಯ ಸರ್ಕಾರವೇ ನಿರ್ಮಾಣ ಮಾಡುವ ಮೂಲಕ ಮುಂದಿನ ದಿನದಲ್ಲಿ ಕೊರತೆಯಾಗದಂತೆ ಈಗಲೇ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ಅವರು ವಿವರಿಸಿದರು.
ಇನ್ನು ಜಿಲ್ಲೆಯಲ್ಲಿ ಖಾಲಿ ಇದ್ದ ಸುಮಾರು 63 ವೈದ್ಯರುಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಹಾಗೂ ಉಪಮುಖ್ಯಮಂತ್ರಿಗಳು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಇನ್ನೊಂದು ವಾರದಲ್ಲಿ ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. 8-10 ದಿನದಲ್ಲಿ ಶೇ.40 ರಷ್ಟು ಇರುವ ಸೋಂಕಿತರನ್ನು ಶೇ.10-12 ರಷ್ಟು ಇಳಿಕೆ ಮಾಡುವ ಪ್ರಯತ್ನಕ್ಕೆ ಸಜ್ಜಾಗಿದ್ದು, ಅಲ್ಲದೇ ಸೋಮವಾರದಿಂದ ಇನ್ನು ಜಿಲ್ಲೆಯಲ್ಲಿ ಕಠಿಣ ನಿಯಮಗಳು ಜಾರಿಗೊಳಿಸಲಿದ್ದು, ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: ಅತ್ಯಾಚಾರ ಆರೋಪ: ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಬಂಧನ