ಹಾಸನ: ಸಾಮಾಜಿಕ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಲ್ಲಿ ಮಾತ್ರ ಸಂಘ ಸಂಸ್ಥೆಗಳು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಕಿವಿಮಾತು ಹೇಳಿದರು.
ಚನ್ನರಾಯಪಟ್ಟಣದ ನವೋದಯ ವೃತ್ತದ ಬಳಿ ಕರ್ನಾಟಕ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಿಸ್ವಾರ್ಥದ ಸೇವೆಯೇ ಸಂಘ ಅಥವಾ ಸಂಘಟನೆಗಳ ಬೆಳವಣಿಗೆಯ ಮೂಲ, ಕನ್ನಡ ಬಾಷೆ, ನಾಡು-ನುಡಿ, ಸಾಹಿತ್ಯ ಹಾಗೂ ಪರಿಸರ ಕಾಳಜಿ ವಿಚಾರದಲ್ಲಿ ಕರ್ನಾಟಕ ಸಂಘದ ಕಾರ್ಯವೈಖರಿ ಹಾಗೂ ಸಾಧನೆ ಅಪಾರ ಎಂದ ಅವರು, ಪುರಸಭೆಯಲ್ಲಿ ಲಭ್ಯವಿರುವ ಅನುದಾನದಲ್ಲಿ ಪಟ್ಟಣವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಎಸ್‌ಎಫ್‌ಸಿ ಯೋಜನೆಯಡಿ 5 ಕೋಟಿ ರೂ. ಸೇರಿದಂತೆ ವಿವಿಧ ಯೋಜನೆಯಡಿ 12 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಪಟ್ಟಣದ ಕೆಲ ವಾರ್ಡ್‌ಗಳ ರಸ್ತೆಯನ್ನು ರೂ. 2.20 ಲಕ್ಷ ವೆಚ್ಚದಲ್ಲಿ ಐದುವರೆ ಮೀಟರ್‌ಗೆ ಅಗಲೀಕರಣಗೊಳಿಸಲಾಗಿದೆ. ಪಟ್ಟಣದ ಅಗತ್ಯ ಸ್ಥಳಗಳಲ್ಲಿ ಹೈಮಾಸ್ ಹಾಗೂ ಬೀದಿ ದೀಪಗಳನ್ನು ಅಳವಡಿಸುವುದರ ಜತೆಗೆ ಪಶು ಆಸ್ಪತ್ರೆಯ ಹಿಂಭಾಗದ ರಸ್ತೆಯಲ್ಲಿ ಸುಲಭ ಶೌಚಗೃಹ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.