ಹಾಸನ: ಹಾಸನ ವಿಮಾನ ನಿಲ್ದಾಣ ಮಾಜಿ ಸಚಿವ ಹೆಚ್ ಡಿ ರೇವಣ್ಣನವರದ್ದಲ್ಲ. ಅವರ ಕುಟುಂಬದ ಒಕ್ಕಣೆ ಮಾಡುವ ಕಣವೂ ಅಲ್ಲ. ಇದು ಹಾಸನದ ಆಸ್ತಿ. ತಜ್ಞರು ಏನು ಹೇಳುತ್ತಾರೋ ಅದನ್ನು ಮಾಡುತ್ತೇವೆ ಎಂದು ಹೆಚ್.ಡಿ ರೇವಣ್ಣ ವಿರುದ್ಧ ಶಾಸಕ ಪ್ರೀತಂ.ಜೆ ಗೌಡ ವಾಗ್ದಾಳಿ ನಡೆಸಿದರು.
ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಇಂದು ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನದ ಏರ್ಪೋರ್ಟ್ ಅಂದ್ರೆ ಅದು ಕೇವಲ ರೇವಣ್ಣ ಅವರಿಗೆ ಮಾತ್ರ ಸೀಮಿತವಲ್ಲ. ಅವರು ಒಕ್ಕಣೆ ಮಾಡುವ ಕಣವೂ ಅಲ್ಲ. ಇದು ಹಾಸನ ಜನರ ಆಸ್ತಿ. ಹಿರಿಯರಾದ ಹೆಚ್ ಡಿ ದೇವೇಗೌಡರು ಸಿಎಂಗೆ ಮನವಿ ಮಾಡಿದ್ದರು. ಅವರ ನಿರ್ಧಾರದಂತೆ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದಾರೆ ಎಂದರು.
ಒಂದು ಬಾರಿ ಪ್ರಧಾನಿ, ಮೂರು ಬಾರಿ ಸಿಎಂ ಆದ ಕುಟುಂಬದವರು ಯಾಕೆ ಏರ್ಪೋರ್ಟ್ ಮಾಡಲಿಲ್ಲ? ಅಧಿಕಾರ ಇದ್ದಾಗ ಮಾಡಲಿಲ್ಲ. ಈಗ ಆ ರೀತಿ ಮಾಡಬೇಕು ಈ ರೀತಿ ಮಾಡಬೇಕು ಎಂದರೆ ಹೇಗೆ? ರೇವಣ್ಣನವರು ಮಾತನಾಡುವುದಾದರೆ 20 ಸಾವಿರ ಜನ ಸೇರಿಸಿ ಮಾತನಾಡಲಿ. ಆಮೇಲೆ ನಾನು ಮಾತನಾಡುತ್ತೇನೆ ಎಂದು ಶಾಸಕ ಪ್ರೀತಂ ಗೌಡ ಸವಾಲು ಹಾಕಿದರು.