ಹಾಸನ: ಗ್ರಾಹಕರು ಮತ್ತು ಆಟೋ ಚಾಲಕರ ಸುರಕ್ಷತೆಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಹೊಸ ಹೆಚ್‌ಸಿಟಿಪಿ ಆ್ಯಪ್ ಜಾರಿಗೆ ತಂದಿದ್ದು, ಇದನ್ನು ಶಾಸಕ ಪ್ರೀತಮ್ ಜೆ. ಗೌಡ ಉದ್ಘಾಟಿಸಿದರು.
ನಗರದ ಎನ್.ಆರ್. ವೃತ್ತದ ಬಳಿ ಜಿಲ್ಲಾ ಪೊಲೀಸ್ ಹಾಗೂ ಸಂಚಾರ ಪೊಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ಆ್ಯಪ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಟೋಗಳಿಗಾಗಿ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಈ ಆ್ಯಪ್ ನಾಗರಿಕರಿಗೆ ಅನುಕೂಲವಾಗುತ್ತದೆ. ಗ್ರಾಹಕರು ಮತ್ತು ಆಟೋ ಚಾಲಕರು ಆ್ಯಪ್ ಬಳಸಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಆಟೋ ಓಡಿಸುವಾಗ ಅವಶ್ಯಕವಾಗಿ ಬೇಕಾಗಿರುವ ಎಲ್ಲಾ ದಾಖಲೆ ಇಟ್ಟುಕೊಳ್ಳಬೇಕು. ಆ್ಯಪ್ಅನ್ನು ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಆಟೋದಲ್ಲಿ ಪ್ರಯಾಣ ಮಾಡುವ ಗ್ರಾಹಕ ಮತ್ತು ಚಾಲಕನಿಗೂ ಸುರಕ್ಷತೆ ಇರುತ್ತದೆ ಎಂದು ಸಲಹೆ ನೀಡಿದರು.
ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ಆಟೋ ಆ್ಯಪ್ ಮಾಡುವಾಗ ಸಂಘದ ಅಧ್ಯಕ್ಷರ ಸಲಹೆಯನ್ನು ಪಡೆಯಲಾಗಿದೆ. ಇದರಿಂದ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಯಾವ ರೀತಿ ಉಪಯೋಗವಾಗುತ್ತದೆ ಮತ್ತು ಸುರಕ್ಷತೆ ಬಗ್ಗೆ ಚರ್ಚಿಸಲಾಗಿತ್ತು. ಅಧಿಕೃತವಾಗಿ ಆ್ಯಪ್ಗೆ ಚಾಲನೆ ಕೊಡಲಾಗಿದೆ. ವಿನೂತನ ಪ್ರಯೋಗಕ್ಕೆ ಸಹಕಾರ ನೀಡಿದ್ದು, ಇದರ ಪ್ರಯೋಜನ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.