ಹಾಸನ: ನಮ್ಮದು ಪ್ರಜಾಪ್ರಭುತ್ವ ಪಕ್ಷ. ನನ್ನನ್ನ ನಾನೇ ಅಭ್ಯರ್ಥಿ ಅಂತಾ ಹೇಳಿಕೊಳ್ಳಲು ನಾನು ದೊಡ್ಡ ಕುಟುಂಬದವನಲ್ಲ. ಪ್ರಜಾ ಪ್ರಭುತ್ವವನ್ನು ಬಿಟ್ಟು ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ರಾಜಕಾರಣ ಮಾಡೋದಕ್ಕೆ ನಮ್ಮಲ್ಲಿ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಶಾಸಕ ಪ್ರೀತಂ ಗೌಡ ಮತ್ತೊಮ್ಮೆ ಜೆಡಿಎಸ್ ಕುಟುಂಬ ರಾಜಕಾರಣವನ್ನು ಪರೋಕ್ಷವಾಗಿ ಕುಟುಕಿದರು.
ಹಾಸನದಲ್ಲಿ ಮಾತನಾಡಿದ ಅವರು, ನಾನು ಅಂದು ಹೇಳಿದ್ದ ಆ ಮಾತಿಗೆ ಯಾವತ್ತೂ ಹಿಂದೆ ಸರಿಯುವುದಿಲ್ಲ. ಮೊದಲು ಯಾರು ಅಭ್ಯರ್ಥಿ ಎಂದು ಅವರು ತೀರ್ಮಾನ ಮಾಡಿಕೊಳ್ಳಲಿ. ನಂತರ ನಾನು ಅವರ ಪ್ರತಿಸ್ಪರ್ಧಿಯಾಗಿ ನಿಲ್ಲವುದು, ಬಿಡದು ನಮ್ಮ ಹೈಕಮಾಂಡ್ಗೆ ಬಿಟ್ಟದ್ದು. ಅವರ ಹಾಗೆ ನಮ್ಮಲ್ಲಿ ನಾನೇ ಅಭ್ಯರ್ಥಿ ಅಂತಾ ಹೇಳಿಕೊಳ್ಳಲು ಸ್ವಾತಂತ್ರ್ಯ ಇಲ್ಲ ಎಂದರು.
ನಮ್ಮದು ಶಿಸ್ತು ಬದ್ಧ ಪಕ್ಷ: ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಚುನಾವಣೆ ಘೋಷಣೆಯಾಗುವ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು. ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾನು ಕೂಡ ಹಾಸನ ಕ್ಷೇತ್ರದ ಪ್ರಬಲ ಆಕಾಂಕ್ಷಿ. ನಮ್ಮ ಪಕ್ಷ ಹಾಸನದಿಂದ ಶಾಸಕ ಕಳೆದ ನಾಲ್ಕೂವರೆ ವರ್ಷದಲ್ಲಿ ಏನೇನು ಕೆಲಸ ಮಾಡಿದ್ದಾನೆ ಅನ್ನೋದನ್ನ ರಿಪೋರ್ಟ್ ತಗೋತಾರೆ. ಅದರ ಆಧಾರದ ಮೇಲೆ ಸಮೀಕ್ಷೆ ಆಗುತ್ತದೆ. ಸಮೀಕ್ಷೆ ಮಾಡಿದ ನಂತರ ಯಾರಿಗೆ ಟಿಕೆಟ್ ಕೊಡಬೇಕು ಅಂತ ಅವರು ತೀರ್ಮಾನ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತಾರೆ. ಆದರೆ ಬೇರೆ ಪಕ್ಷದ ರೀತಿ ನಮ್ಮ ಪಕ್ಷದಲ್ಲಿ ಇಲ್ಲ. ನಮ್ಮದು ಶಿಸ್ತು ಬದ್ಧ ಪಕ್ಷ. ನನ್ನ ಮಾರ್ಕ್ಸ್ ಕಾರ್ಡ್ ಚೆನ್ನಾಗಿದೆ ಅಂತಾ ನನಗೆ ಅನಿಸುತ್ತಿದೆ. ಹಾಗಾಗಿ ಈ ಬಾರಿಯೂ ನನಗೆ ಸಿಗಬಹುದು ಎಂಬ ಭರವಸೆಯಿದೆ ಎಂದರು.
ಟಿಕೆಟ್ ನೀಡಿದ ಮೇಲೆ ನಾನು ಉತ್ತರ ಕೊಡುತ್ತೇನೆ: ರೇವಣ್ಣ ಹಾಸನದಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಕ್ರೀಟ್ ಹಾಕಿ ಫೈನಲ್ ಆದ್ಮೇಲೆ ನಾನು ಮಾತಾಡ್ತೀನಿ. ಪ್ರತಿದಿನ ಅದನ್ನೇ ಯಾಕೆ ಕೇಳ್ತೀರಿ?. ಅಲ್ಲಿ ರೇವಣ್ಣ ಅಥವಾ ಅಕ್ಕ ಭವಾನಿ ಅಥವಾ ತಮ್ಮ ಸ್ವರೂಪ ನಿಲ್ಲಬಹುದು. ಇಲ್ಲವೇ ಕಾಂಗ್ರೆಸ್ನಿಂದ ಮಂಜೇಗೌಡ್ರು ಬನವಾಸಿ ರಂಗಸ್ವಾಮಿ ಇನ್ನು ಬೇರೆ ಬೇರೆ ಪಕ್ಷದಿಂದ ಯಾರೇ ನಿಂತ್ರು ನಾನು ಅವರಿಗೆ ಪ್ರತಿಸ್ಪರ್ಧೆ ಮಾಡಬೇಕು ಅನ್ನೋದನ್ನ ಪಕ್ಷ ನನಗೆ ಟಿಕೆಟ್ ನೀಡಿದ ಮೇಲೆ ನಾನು ಉತ್ತರ ಕೊಡುತ್ತೇನೆ ಎಂದರು.
ಇನ್ನು ಫೆ. 21ರಂದು, ಹಾಸನಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆ.ಪಿ ನಡ್ಡಾ ಆಗಮಿಸುವ ಹಿನ್ನೆಲೆ ಕಾರ್ಯಕ್ರಮ ಆಯೋಜನೆಯಾಗಿದೆ. ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಕಾರ್ಯಕ್ರಮ ಇದು. ಮುಖ್ಯಮಂತ್ರಿ ಬರುವ ನನಗೆ ಮಾಹಿತಿಯಿಲ್ಲ. ಆದರೆ, ಇದು ಜಿಲ್ಲಾಮಟ್ಟದ ಕಾರ್ಯಕ್ರಮ ಆಗಿರುವುದರಿಂದ ನಮ್ಮ ಬೂತ್ ಮಟ್ಟದ ಕಾರ್ಯಕರ್ತರ ಸಭೆಗೆ ರಾಜ್ಯ ನಾಯಕರು ಆಗಮಿಸುತ್ತಾರೆ ಎಂದರು.
ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದೇನೆ..: ಬಜೆಟ್ನಲ್ಲಿ ನಮ್ಮ ಹಾಸನ ಜಿಲ್ಲೆಗೆ ಏನು ಘೋಷಣೆ ಆಗಿಲ್ಲ ಎನ್ನುವುದಕ್ಕಿಂತ ನಾನು ಹಾಸನಕ್ಕೆ ಏನು ಕೆಲಸ ಮಾಡಿಸಿಕೊಂಡು ಬಂದೆ ಅನ್ನೋದು ಮುಖ್ಯ. ಬಜೆಟ್ ಅಲ್ಲಿ ಘೋಷಣೆ ಮಾಡಿಸಿಕೊಳ್ಳುವುದಾದರೆ ಅಂತಹ ನೂರು ಕಾರ್ಯಕ್ರಮಗಳನ್ನ ಘೋಷಣೆ ಮಾಡಿಸಿಕೊಳ್ಳಬಹುದು. ಜನಪ್ರತಿನಿಧಿಗಳಾಗಿ ಯಾರು ಏನು ಕೆಲಸ ಮಾಡಬೇಕು ಅನ್ನೋದು ಅವರು ಮಾಡಿದ್ರೆ ಬಹುಶಃ ಮುಖ್ಯಮಂತ್ರಿಗಳ ಗಮನ ಸೆಳೆಯಬಹುದಾಗಿತ್ತು. ಆದರೆ, ಯಾರು ಅಂತಹ ಕೆಲಸ ಮಾಡಿಲ್ಲ. ಆದರೆ ನಾನು ನನ್ನ ಕ್ಷೇತ್ರಕ್ಕೆ ಏನು ಬೇಕೋ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದರು.
ಮಾರ್ಚ್ ಕೊನೆಯ ವಾರದಲ್ಲಿ ನಮ್ಮ ಚುನಾವಣೆ ಸಮಿತಿ ಸಭೆ ಸೇರಬಹುದು. ನನಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆಯಿದೆ. ಆದರೆ ಯಾವ ಕ್ಷೇತ್ರದಲ್ಲಿ ಟಿಕೆಟ್ ಕೊಡ್ತಾರೆ ಎಂಬ ಬಗ್ಗೆ ಕುತೂಹಲ ಇದೆ. ನಾನು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ ಒಬ್ಬ ಶಾಸಕ. ಈಗಾಗಲೇ ನೂರಾರು ಕೋಟಿ ಅನುದಾನವನ್ನು ತಂದು ಅಭಿವೃದ್ಧಿ ಮಾಡಿದ್ದೇನೆ. ಮತ್ತೇನು ಅಭಿವೃದ್ಧಿ ಮಾಡಬೇಕು ಎಂಬುದು ಜನರು ಹೇಳಿದ್ರೆ ಅದನ್ನ ನಾನು ಮಂತ್ರಿಗಳ ಜತೆ ಮಾತುಕತೆ ನಡೆಸಿ ಅನುದಾನ ತರುತ್ತೇನೆ ಎಂದು ಶಾಸಕ ಪ್ರೀತಂ ಗೌಡ ಭರವಸೆ ನೀಡಿದರು.
ಇದನ್ನೂ ಓದಿ: 'ರೇವಣ್ಣ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆಲ್ಲುವೆ.. 1 ಮತ ಕಡಿಮೆಯಾದರೂ ಮತ್ತೆ ಚುನಾವಣೆಗೆ ಹೋಗುವೆ'