ಸಕಲೇಶಪುರ: ಕಾಡಾನೆ ಹಾವಳಿಯಿಂದ ಉಂಟಾಗಿರುವ ರೈತರ ಬೆಳೆ ನಷ್ಟಕ್ಕೆ ಕೂಡಲೇ ಸರ್ಕಾರ ಬೆಳೆ ಪರಿಹಾರ ಬಿಡುಗಡೆ ಮಾಡಬೇಕೆಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ತಾಲೂಕಿನ ಬಿರಡಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಳೆಗಾರರ ಜಮೀನುಗಳಲ್ಲಿ ಕಾಡಾನೆ ಹಾವಳಿ ಕುರಿತು ಸಭೆ ನಡೆಸಿದರು. ಬಳಿಕ ಬಿರಡಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ಹಾನಿಗೀಡಾಗಿರುವ ಜಮೀನುಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಹೆತ್ತೂರು, ಯಸಳೂರು ಹೋಬಳಿಗಳಿಗೆ ಸೀಮಿತವಾಗಿದ್ದ ಕಾಡಾನೆಗಳ ಉಪಟಳ ಇಂದು ಎಲ್ಲಾ ಹೋಬಳಿಗಳಿಗೆ ವಿಸ್ತರಿಸಿದೆ. ನೂರಾರು ರೈತರ ಕೋಟ್ಯಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಕೂಡಲೇ ಕಾಡಾನೆಗಳನ್ನು ಸ್ಥಳಾಂತರ ಮಾಡುವ ಕೆಲಸ ಮಾಡಬೇಕು. ಈಗಾಗಲೇ ಅರಣ್ಯ ಸಚಿವರೊಡನೆ ಮಾತನಾಡಿದ್ದೇನೆ. ಉನ್ನತ ಅರಣ್ಯ ಅಧಿಕಾರಿಗಳು ಕೂಡಲೇ ಸಭೆ ನಡೆಸಿ ಒಂದು ತೀರ್ಮಾನ ಕೈಗೊಳ್ಳಬೇಕು ಹಾಗೂ ಕನಿಷ್ಠ ಬಾಕಿ ಉಳಿದಿರುವ 60 ಲಕ್ಷ ರೂ. ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಕವನ್ ಗೌಡ ಮಾತನಾಡಿ, ಕಾಡಾನೆ ಹಾವಳಿಯಿಂದ ರೈತರಿಗೆ ತುಂಬಾ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾನಿಗೊಳಗಾದ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಾಡಾನೆ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಹುಡುಕಿಕೊಡಬೇಕು ಎಂದರು.