ಹಾಸನ: ಕೊರಿಯರ್ ಶಾಪ್ವೊಂದರಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿ ಮಾಲೀಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಇಂದು ಸಂಜೆ 7:30ರ ಸಂದರ್ಭದಲ್ಲಿ ಘಟನೆ ನಡೆದಿದೆ. ಕೊರಿಯರ್ನಲ್ಲಿ ಬಂದಿದ್ದ ಮಿಕ್ಸಿಯನ್ನು ತರೆಯುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ನಗರದ ಕೆ ಆರ್ ಪುರಂ ಬಡಾವಣೆಯಲ್ಲಿರುವ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಬ್ಲಾಸ್ಸ್ ಆಗಿದೆ. ಕಚೇರಿ ಮಾಲೀಕ ಶಶಿ ಎಂಬುವರ ಬಲಗೈ ಐದು ಬೆರಳುಗಳು ಸಂಪೂರ್ಣ ತುಂಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್, ಗಾಯಾಳುವಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಮಿಕ್ಸಿ ಬ್ಲೇಡ್ ತಾಗಿ ಅವರಿಗೆ ಪೆಟ್ಟಾಗಿದೆ. ಮೈಸೂರಿನಿಂದ ಎಫ್ ಎಸ್ ಎಲ್ ತಂಡ ಆಗಮಿಸಿ, ಪರಿಶೀಲನೆ ನಡೆಸಲಿದೆ. ಕೊರಿಯರ್ ಎಲ್ಲಿಂದ ಬಂತು ಅನ್ನೋ ಮಾಹಿತಿ ಇದೆ. ಯಾವುದೇ ಊಹಾಪೋಹ, ಗೊಂದಲ ಬೇಡ. ಪರಿಶೀಲನೆ ನಡೆಸುತ್ತಿದ್ದೇವೆ. ಎಫ್ಎಸ್ಎಲ್ ನೀಡುವ ವೈಜ್ಞಾನಿಕ ಸಾಕ್ಷ್ಯಾಧಾರದ ಆಧರಿಸಿ ತನಿಖೆ ಮುಂದುವರಿಸಲಾಗುತ್ತದೆ ಎಂದರು.
ಎರಡು ದಿನಗಳ ಹಿಂದೆ ಡಿಟಿಡಿಸಿ ಕೊರಿಯರ್ಗೆ ಬಂದಿದ್ದ ಪಾರ್ಸೆಲ್ ಅನ್ನು ನಗರದ ವ್ಯಕ್ತಿ ಒಬ್ಬರಿಗೆ ಡೆಲಿವರಿ ಮಾಡಿದ್ದರು. ಆದರೆ ಎರಡು ದಿನಗಳ ಬಳಿಕ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ಕೊರಿಯರ್ಗೆ ವಾಪಸ್ ನೀಡಿದ ವ್ಯಕ್ತಿ, ವಾಪಸ್ ಪಡೆಯುವ ವೇಳೆ ಘಟನೆ ಸಂಭವಿಸಿದೆ. ಬ್ಲಾಸ್ಟ್ ಆದ ಹಿನ್ನೆಲೆಯಲ್ಲಿ ಕೊರಿಯರ್ನ ಹಲವು ವಸ್ತುಗಳಿಗೆ ಹಾನಿಯಾಗಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಕುಕ್ಕರ್ ಬ್ಲಾಸ್ ಬೆನ್ನಲ್ಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
(ಓದಿ: ಸ್ಫೋಟದ ಪ್ರಮುಖ ಆರೋಪಿ ಶಾರೀಕ್ಗೆ ಐಸಿಸ್ ಉಗ್ರ ಸಂಘಟನೆ ಪ್ರೇರಣೆ: ಎಡಿಜಿಪಿ ಅಲೋಕ್ ಕುಮಾರ್)