ಹಾಸನ: ಮಲೆನಾಡು ಮತ್ತು ಅರೆ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ತಡೆಯಲು ಬ್ಯಾರಿಕೇಡ್ ನಿರ್ಮಾಣಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಲು ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆಯನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬೇಲೂರಿನಲ್ಲಿ ಬೆಳಗ್ಗೆ 11ಗಂಟೆಗೆ ಮತ್ತು ಸಕಲೇಶಪುರದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾವೇಶ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರಾಜ್ಯ ಮತ್ತು ದೇಶಕ್ಕೆ ನೀಡಿರುವ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಸಾಧನೆಗಳನ್ನು ಮಂಡಿಸಲಿದ್ದಾರೆ.
ಜಿಲ್ಲೆಯಲ್ಲಿ 4-5 ದಶಕಗಳಿಂದ ಇರುವ ಜ್ವಲಂತ ಸಮಸ್ಯೆಗಳಾದ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ, ಎತ್ತಿನಹೊಳೆ ಕಾಮಗಾರಿ ಬಗ್ಗೆ ಹಾಗೂ ಕಾಫಿ ಪ್ಲಾಂಟರ್ಸ್ ಜಮೀನು ಒತ್ತುವರಿ ಸಮಸ್ಯೆಗೆ ವಿಧಾನಸಭೆಯಲ್ಲಿ ಬಿಲ್ ಪಾಸ್ ಮಾಡಿ ಹೊಸ ವರ್ಷಕ್ಕೆ ಒಂದು ಪರ್ಯಾಯ ಮಾರ್ಗ ಕಂಡುಹಿಡಿಯುವ ಯೋಜನೆ ರೂಪಿಸಲಾಗುವುದು ಎಂದರು.
ಎತ್ತಿನಹೊಳೆ ಯೋಜನೆಯಿಂದ ಸಕಲೇಶಪುರ ಮತ್ತು ಬೇಲೂರು ಭಾಗದ ಹಲವೆಡೆ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಮುಂದಿನ ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಡಲು ನಿರ್ಧರಿಸಲಾಗಿದೆ. ಎತ್ತಿನಹೊಳೆ ವಿಚಾರದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಕೂಡಾ ಭರವಸೆ ನೀಡಿ ಸುಮ್ಮನಾಗಿತ್ತು. ಆದ್ರೆ ನಮ್ಮ ಸರ್ಕಾರ ನುಡಿದಂತೆ ನಡೆದುಕೊಳ್ಳುವ ಮೂಲಕ ಕೆಲಸ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.
ಕೇರಳ ಸರ್ಕಾರ ಮಾಡಿದ ಕಾಮಗಾರಿಗಿಂತ ಉತ್ತಮವಾಗಿ ಕಾಮಗಾರಿ ಮಾಡಲು ಕಂದಾಯ ಸಚಿವರ ಜೊತೆ ಚರ್ಚಿಸಲಾಗುವುದು. ಬಾಕಿ ಉಳಿದಿರುವ ಪರಿಹಾರದ ಹಣವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ಹಾಸನದಿಂದ ಸಕಲೇಶಪುರಕ್ಕೆ ಹೋಗುವ ಸಂಪರ್ಕ ರಸ್ತೆ ಕಾಮಗಾರಿ ನಿಧಾನವಾಗಿರುವುದು ತಿಳಿದಿದೆ. ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 198ರಿಂದ ಕಾಡಾನೆ ಸಮಸ್ಯೆ ಪ್ರಾರಂಭವಾಗಿದ್ದು, ಎತ್ತಿನಹೊಳೆಗೆ ಸಾವಿರಾರು ಕೋಟಿ ಬಿಡುಗಡೆ ಮಾಡಲಾಗಿದೆ.
ಅರಣ್ಯ ಇಲಾಖೆ ಕೇಳಿರುವ ಕೇವಲ 38 ಕೋಟಿ ಹಣವನ್ನು ಆನೆ ಕಾರಿಡಾರ್ ನಿರ್ಮಾಣಕ್ಕೆ ಕೊಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಮುಖ್ಯಮಂತ್ರಿಗಳು ಇದಕ್ಕೆ ಒಪ್ಪಿದ್ದಾರೆ. ಆದರೆ ಕಾಮಗಾರಿ ಮುಗಿಸಲು 2 ತಿಂಗಳು ಸಾಕಾಗುವುದಿಲ್ಲ. ಈಗಾಗಲೇ ಕೆಲಸ ಆರಂಭವಾಗಿದೆ. ಕಾಡಾನೆಯಿಂದ ಆಗಿರುವ ಹಾನಿ ಬಗ್ಗೆ ನಮಗೂ ನೋವಿದೆ. ಎಲ್ಲಾ ವಿವರವನ್ನು ಸಿಎಂ ಗಮನಕ್ಕೆ ತಂದಿದ್ದು, 38 ಕೋಟಿ ರೂಪಾಯಿ ಕೊಟ್ಟು ನಮ್ಮ ಅವಧಿಯಲ್ಲೇ ಕಾರಿಡಾರ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ: ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣಾ ಮಸೂದೆ ಮಂಡನೆ: ಸಿಎಂ ಬೊಮ್ಮಾಯಿ