ಹಾಸನ : ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನ ವಿ ಸೋಮಣ್ಣಗೆ ಕೊಡಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತಿದೆ. ಇದಕ್ಕೆ ಪೂರಕವಾಗಿ ವಿ.ಸೋಮಣ್ಣ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅರಸೀಕೆರೆಗೆ ಆಗಮಿಸಿದ್ದ ಸಚಿವ ಸೋಮಣ್ಣ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಹಾಸನ ರಾಜಕೀಯಕ್ಕೆ ಮರಳಬೇಕು ಅರಸೀಕೆರೆಯಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕೊಂಡೊಯ್ಯಲು ಈಗ ಉತ್ತಮ ಅವಕಾಶವಿದೆ. ಪಕ್ಷ ಸಂಘಟನೆಗೆ ಕಾಲ ಕೂಡಿ ಬಂದಿದೆ. ಈಗಾಗಾಲೇ ನಗರಸಭೆ, ನಗರಾಭಿವೃದ್ದಿ ಪ್ರಾಧಿಕಾರ, ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸ್ಥಾನ ಕೂಡ ಬಿಜೆಪಿ ಹಿಡಿತದಲ್ಲಿವೆ.
ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಶತಾಯಗತಾಯ ಅರಸೀಕೆರೆ ಸೇರಿ ಉಳಿದ ಎಲ್ಲ ತಾಲೂಕುಗಳಲ್ಲಿಯೂ ಬಿಜೆಪಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕ್ಷೇತ್ರ ಗೆಲ್ಲಬೇಕು ಎಂಬ ಛಲದಿಂದ ಅರಸೀಕೆರೆ ಕ್ಷೇತ್ರದ ರಾಜಕಾರಣಕ್ಕೆ ದಾಪುಗಾಲಿಡಬೇಕು ಎಂದು ಸೋಮಣ್ಣ ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.
ಇದರ ಬೆನ್ನಲ್ಲೇ ವಿ.ಸೋಮಣ್ಣ ಹಾಸನ ಜಿಲ್ಲೆಯ ಕೋಡಿಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿರುವುದು ಮುಂದಿನ ದಿನಗಳಲ್ಲಿ ರಾಜಕೀಯ ಸಂಚಲವನ್ನು ಉಂಟು ಮಾಡಬಹುದು. ಕಳೆದ ಬಾರಿ ತನ್ನ ಮಗ ಅರುಣ್ ಅವರನ್ನು ಅರಸೀಕೆರೆ ಕ್ಷೇತ್ರದಿಂದ ಕಣಕ್ಕಿಳಿಸಲು ಅಖಾಡ ಸಜ್ಜುಗೊಳಿಸಿಕೊಂಡಿದ್ದರು.
ಆದರೆ, ಅದು ಫಲಪ್ರದವಾಗಲಿಲ್ಲ. ಈಗ ಸ್ವತಃ ವಿ ಸೋಮಣ್ಣ ಮತ್ತೆ ಮಂತ್ರಿಯಾಗಿರುವುದರಿಂದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಮೂಲಕ ಬಿಗಿಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ.
ಇದನ್ನೂ ಓದಿ: ಜಮೀನು ವಿಚಾರವಾಗಿ ಸೊಸೆಯಂದಿರ ಜಗಳ ಸಾವಿನಲ್ಲಿ ಅಂತ್ಯ