ಹಾಸನ : ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮತ್ತು ಹೆಚ್ ಡಿ ರೇವಣ್ಣರಿಂದ ನಾನು ಕಲಿತಿರೋ ಪಾಠ ಸಾಕಷ್ಟಿದೆ. ಪ್ರೀತಮ್ ಗೌಡ ನೀನು ಇನ್ನೂ ಬೆಳೆಯುವವನು ಎಲ್ಲರೂ ಮೆಚ್ಚುವಂತೆ ಕೆಲಸ ಮಾಡು. ಯಾವುದೇ ಪಕ್ಷದ ಬಡವರ ಹೆಸರನ್ನು ಪಟ್ಟಿ ಮಾಡಿ ಸರ್ಕಾರಿ ಮನೆ ಕೊಡಿಸು ಎಂದು ವಸತಿ ಸಚಿವ ವಿ. ಸೋಮಣ್ಣ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ನಡೆದ ವಿವಿಧ ವಸತಿ ಯೋಜನೆಗಳ ಅನುಷ್ಠಾನ ಕುರಿತಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಾನು ಬೆಂಗಳೂರಿನಲ್ಲಿ ಏಕೆ ಗೆಲ್ಲುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೋ?. ಬೆಂಗಳೂರಿನ ನನ್ನ ಕ್ಷೇತ್ರದಲ್ಲಿ ಲಿಂಗಾಯಿತರ ಕೇವಲ 7 ಸಾವಿರ ಮತಗಳಿಲ್ಲ ಎಂದು ಇದೇ ವೇಳೆ ಶಾಸಕ ಪ್ರೀತಮ್ ಜೆ ಗೌಡರಿಗೆ ಕಿವಿಮಾತು ಹೇಳಿದರು.
ಅರ್ಹ ಬಡವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಆದರೆ, ಅವು ಉಳ್ಳವರ ಪಾಲಾಗುತ್ತಿದ್ದು, ಮುಂದೆ ಇಂತಹ ತಪ್ಪುಗಳು ಮರುಕಳಿಸಿದ್ರೇ ಅಂತಹ ಗ್ರಾಮ ಪಂಚಾಯತ್ ಪಿಡಿಒ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಗುಡುಗಿದರು. ನನ್ನ ವಸತಿ ಇಲಾಖೆಯಲ್ಲಿ ಸಾಕಷ್ಟು ಲೋಪದೋಷಗಳಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಗ್ರಾಮ ಪಂಚಾಯತ್‌ನ ಪಿಡಿಒಗಳು ಅಧಿಕಾರಿಗಳಂತೆ ಕೆಲಸ ಮಾಡದೆ, ರಾಕ್ಷಸರಂತೆ ವರ್ತಿಸುತ್ತಿದ್ದಾರೆ.
ವಸತಿಗಾಗಿ ಬಡವರು, ನಿರ್ಗತಿಕರು ಅಲೆದಾಡುತ್ತಿದ್ದಾರೆ. ಇಂತಹವರ ಬಗ್ಗೆ ಗಮನ ಕೊಡದೇ ಸರ್ಕಾರದ ಯೋಜನೆಗಳು ಕೇವಲ ಉಳ್ಳವರ ಪಾಲಾಗುತ್ತಿವೆ. ಇದಕ್ಕೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯ ಮತ್ತು ಗ್ರಾಮ ಪಂಚಾಯತ್ ಪಿಡಿಒಗಳ ಸರ್ವಾಧಿಕಾರಿ ಧೋರಣೆಯೇ ಕಾರಣ ಎಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ವಸತಿಗಳಿಗೆ ಶಾಸಕರು ಎಷ್ಟೇ ಪಟ್ಟಿ ನೀಡಿದ್ರೂ ಕೂಡ ಫಲಾನುಭವಿಗಳಿಗೆ ಮಾತ್ರ ಹಣ ನೀಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ 5.40 ಲಕ್ಷ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಪಿಡಿಒಗಳು ಮಾಡುವ ಪಾಪದ ಕೆಲಸಕ್ಕೆ ನೀವು ಬಲಿಯಾಗಬೇಡಿ ಎಂದು ತಾಪಂ ಇಒಗಳಿಗೆ ಸಲಹೆ ಕೊಟ್ಟರು. ಈಗಲಾದರೂ ಪಿಡಿಒಗಳು ಮತ್ತು ತಾಪಂ ಇಒಗಳು ಆತ್ಮಾವಲೋಕನ ಮಾಡಿಕೊಂಡು ಸರಿಯಾದ ರೀತಿ ಕೆಲಸ ಮಾಡಬೇಕೆಂದು ಆದೇಶ ಮಾಡಿದರು.
ನಾನು ಜಿಲ್ಲೆಗೆ ಬಂದು ಪ್ರಗತಿ ಪರಿಶೀಲನೆ ಮಾಡಲು ಹಿರಿಯ ಶಾಸಕರಾದ ಎ ಟಿ ರಾಮಸ್ವಾಮಿ ಅವರು ನೀಡಿದ ಸಲಹೆಯೇ ಪ್ರಮುಖ ಕಾರಣ. ಉಳಿದಿರುವ ನನ್ನ ಕಾಲಾವಧಿಯೊಳಗೆ ರಾಜ್ಯದಲ್ಲಿ ನನ್ನ ಇಲಾಖೆಯಲ್ಲಿ ಉತ್ತಮ ರೀತಿ ಕೆಲಸ ಮಾಡಿ ಬಡವರಿಗೆ ಮತ್ತು ನಿರ್ಗತಿಕರಿಗೆ ಒಂದು ಸೂರು ಕಲ್ಪಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದೇನೆ. ಅದಕ್ಕೆ ಎಲ್ಲಾ ಶಾಸಕರ ಸಹಕಾರ ಮತ್ತು ಅಧಿಕಾರಿಗಳ ಶ್ರಮ ಮತ್ತು ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿ, ಅಧಿಕಾರಿಗಳು ಸಚಿವರಿಗೆ ಒಂದು ಮಾಹಿತಿ ನೀಡುತ್ತಾರೆ. ನಮಗೆ ಒಂದು ಮಾಹಿತಿ ನೀಡಿ ದಾರಿ ತಪ್ಪಿಸುತ್ತಾರೆ. ನನ್ನ ಕ್ಷೇತ್ರದಲ್ಲಿ ಸಾಕಷ್ಟು ವಸತಿ ಪ್ರದೇಶಗಳ ಕಾಮಗಾರಿಗಳು ಪ್ರಾರಂಭಗೊಂಡು ಪೂರ್ಣಗೊಂಡಿವೆ. ಆದರೂ ಕೂಡ ಹಣ ಬಿಡುಗಡೆಯಾಗಿಲ್ಲ. ತಕ್ಷಣವೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.