ಹಾಸನ: ರಾಜ್ಯ ಲೋಕ ಸೇವಾ ಆಯೋಗದ ಬದಲು 2,500 ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಖಾಲಿ ಇರುವ ವೈದ್ಯ ಹುದ್ದೆಗಳನ್ನು ಮೂರು ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಸ್ಥಳೀಯವಾಗಿ ಎಂಬಿಬಿಎಸ್ ಪದವೀಧರರು ಡಿಎಚ್ಒ ಅವರನ್ನು ಸಂಪರ್ಕಿಸಬೇಕು. ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಆರೋಗ್ಯ ಕ್ಷೇತ್ರ ಸುಧಾರಣೆ ಮಾಡಲು ಶ್ರಮಿಸುತ್ತಿದ್ದೇನೆ. ಶೇಕಡಾ 60ರಷ್ಟು ಜನರು ಬಡವರಿದ್ದು, ಅವರಿಗೆ ಆರೋಗ್ಯ ಸೇವೆ ಲಭ್ಯವಾಗಬೇಕು. ಮೂರು ವರ್ಷದಲ್ಲಿ ಉತ್ತಮ ಆಡಳಿತ ನೀಡಬೇಕಾಗಿದ್ದು ನಮ್ಮ ಗುರಿ ಎಂದು ನುಡಿದರು.‘‘
ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು, ಆಯುಷ್ಮಾನ್ ಯೋಜನೆ, ಸಾಂಕ್ರಾಮಿಕ ರೋಗ ಹಾಗೂ ಕೊರೊನಾ ವೈರಸ್ ಸೋಂಕಿನ ಕುರಿತು ಜನರಿಗೆ ಅರಿವು ಮೂಡಿಸಲು ಎಲ್‌ಇಡಿ ವಾಹನಗಳು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಲಿದೆ. ಸದ್ಯ 15 ವಾಹನಗಳು ಸಂಚರಿಸುತ್ತಿದ್ದು, ದಿನಕ್ಕೆ 20 ಹಳ್ಳಿಗಳಿಗೆ ವಾಹನ ಭೇಟಿ ನೀಡಲಿದೆ ಎಂದರು.
ಹಾನುಬಾಳು ಹೋಬಳಿ ಸರ್ಕಾರಿ ಆಸ್ಪತ್ರೆ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು, ಅವುಗಳನ್ನು ತೆರವುಗೊಳಿಸಬೇಕು. ಜಿಲ್ಲೆಯ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.
ಹಿಂದುಳಿದ ವರ್ಗದವರು ತಮ್ಮ ಬೇಡಿಕೆಗಳಿದ್ದರೆ ಸ್ಥಳೀಯ ನಾಯಕರ ಶಿಫಾರಸ್ಸು ಪತ್ರದೊಂದಿಗೆ ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡುವಂತೆ ತಿಳಿಸಿದರು.