ಹಾಸನ: ಲಾಕ್ಡೌನ್ ಸಮಯದಲ್ಲಿ ಜೀವದ ಹಂಗು ತೊರೆದು ಧೈರ್ಯದಿಂದ ಕಾರ್ಯನಿರ್ವಹಿಸಿದ, ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಗಳ ಚೆಕ್ನನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ವಿತರಿಸಿದರು.
ಸಹಕಾರ ಇಲಾಖೆ, ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಹಾಸನ ಸಹಕಾರಿ ಹಾಲು ಒಕ್ಕೂಟ ನಿ., ಹಾಸನ ಜಿಲ್ಲಾ ಸಹಕಾರ ಒಕ್ಕೂಟ ನಿ., ಹಾಸನ ತಾಲೂಕಿನ ವಿವಿಧ ಸಹಕಾರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಬಿ.ಸಿ. ರಾಯ್ ಸಭಾಂಗಣದಲ್ಲಿ ಆಶಾ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡಿದ್ದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ಜಿಲ್ಲೆಗೆ ಹೊರರಾಜ್ಯದಿಂದ ಇನ್ನು ಸಾಕಷ್ಟು ಮಂದಿ ಬರುವ ಸಾಧ್ಯತೆ ಇದೆ. ಬಂದವರನ್ನು ಎಲ್ಲಿ ಕ್ವಾರಂಟೈನ್ ಮಾಡಬೇಕು ಹಾಗೂ ಹೇಗೆ ತಪಾಸಣೆ ಮಾಡಬೇಕು ಎಂಬುದರ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಂಡು ಸಮರ್ಥವಾಗಿ ನಿಭಾಯಿಸಬೇಕು ಎಂದರು.
ರಾಜ್ಯದಲ್ಲಿ ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರಮಿಸಿದ 40 ಸಾವಿರಕ್ಕೂ ಹೆಚ್ಚಿನ ಆಶಾ ಕಾರ್ಯಕರ್ತೆರು, ರೈತರು, ಕಾರ್ಮಿಕರ ಪರವಾಗಿ ಹಾಗೂ ಎಲ್ಲಾ ಜನತೆಯ ಒಳಿತಿಗಾಗಿ ಸರ್ಕಾರವು ಕೆಲಸ ಮಾಡುತ್ತದೆ ಎಂದು ಹೇಳಿದರು.