ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದೊಂದಿಗೆ ಕಾಲೇಜು ಸ್ಥಾಪನೆ ಮಾಡಲಿದ್ದು, ಶೇ.75ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಡಲಾಗುವುದು ಎಂದು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಂದಿನ ವರ್ಷದ ವೇಳೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಐಟಿಐ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜು ತೆರೆಯುವ ಚಿಂತನೆ ಇದೆ. ಕೇಂದ್ರ ಸರ್ಕಾರದಿಂದ ಶೇ. 60 ಹಾಗೂ ರಾಜ್ಯದಿಂದ ಶೇ. 40ರಷ್ಟು ಅನುದಾನದಿಂದ ಕಾಲೇಜು ಪ್ರಾರಂಭವಾಗಲಿದೆ ಎಂದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಹಾಗೂ ತಾಂತ್ರಿಕ ಪರಿಣತಿ ಹೊಂದಲು ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಇದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾರ್ಯಾರಂಭವಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ತಾಂತ್ರಿಕ ಶಿಕ್ಷಣ ಹೊಂದಿರುವ ವಿದ್ಯಾರ್ಥಿಗಳ ಕೊರತೆಯಿದೆ. ಇಲ್ಲಿನ ಕೈಗಾರಿಕೆಗಳಿಗೂ ಹೆಚ್ಚು ನುರಿತ ಅಭ್ಯರ್ಥಿಗಳು ಬೇಕಾಗಿದ್ದು, ಕಾಲೇಜುಗಳ ಸ್ಥಾಪನೆಯಿಂದ ಕೊರತೆಯನ್ನು ಸರಿಪಡಿಸಲಾಗುವುದು ಎಂದರು.
ಕೆಐಎಡಿಬಿಯಿಂದ ಜವಳಿ ಮೆಗಾ ಯುನಿಟ್ ಕಾರ್ಖಾನೆಯನ್ನು ತೆರೆಯುವ ನಿಟ್ಟಿನಲ್ಲಿ ಇಲಾಖೆಯಿಂದ ಯೋಜನೆ ರೂಪಿಸುವ ಚಿಂತನೆ ಸರ್ಕಾರ ಮಾಡುತ್ತಿದೆ. ಕೈಮಗ್ಗ ವಲಯ ಇಂದಿನ ಆಧುನಿಕತೆ ಭರಾಟೆಯಲ್ಲಿ ಹೆಚ್ಚು ನಷ್ಟ ಅನುಭವಿಸುತ್ತಿದೆ. ಇಲ್ಲಿ ದುಡಿಯುವವರು ಲಾಭಕ್ಕಿಂತಲು ದೇಶ ಸೇವೆ ಮಾಡುತ್ತಿದ್ದೇವೆ ಎಂದು ಭಾವಿಸಿದ್ದಾರೆ. ಇವರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ಹಾಗೂ ಸಹಾಯ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ, ಜವಳಿ ಹಾಗೂ ಕೈಮಗ್ಗ ಕ್ಷೇತ್ರ ಬೆಳವಣಿಗೆಗೆ ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಕೋವಿಡ್ ಲಾಕ್ಡೌನ್ನಿಂದ ಕೈಮಗ್ಗ ಮತ್ತು ಜವಳಿ ನೇಕಾರರು ಸಂಕಷ್ಟದಲ್ಲಿದ್ದು, ಸಹಾಯ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ, ನೇಕಾರ್ ಸನ್ಮಾನ್ ಯೋಜನೆ ಮೂಲಕ ಪ್ರತಿ ವರ್ಷ 2 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ 41 ಸಾವಿರ ಜನ ಅರ್ಜಿ ಸಲ್ಲಿಸಿದ್ದು, 8.32 ಕೋಟಿ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ. ವಿದ್ಯುತ್ ಮಗ್ಗಗಳಲ್ಲಿಯೂ ಸಹ 1.25 ಲಕ್ಷ ಜನರಿದ್ದು, 40 ಸಾವಿರ ಜನರಿಗೆ 8.13 ಕೋಟಿ ಹಣವನ್ನು ಜಮಾ ಮಾಡಲಾಗಿದೆ. ಅರ್ಜಿ ಸಲ್ಲಿಕೆಯಲ್ಲಿ ಹೆಚ್ಚು ಬಾಕಿ ಉಳಿದಿರುವ ಜಿಲ್ಲೆಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿ ನೇಕಾರು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳೀಕರಿಸಲಾಗುವುದು. ನೇಕಾರರ ಖಾತೆಗೆ ನೇರವಾಗಿ ಜಮಾ ಆಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಕಷ್ಟದ ಸಮಯದಲ್ಲಿ ನೇಕಾರರು ಸಾಲ ಸೌಲಭ್ಯ ಪಡೆದಿದ್ದು 1 ಲಕ್ಷದವರೆಗೆ ಸಾಲ ಮನ್ನಾ ಮಾಡಲಾಗಿದೆ. ಶೇ. 80ರಷ್ಟು ಮಂದಿ ಲಾಭ ಪಡೆದಿದ್ದಾರೆ. ಹಾಗೆಯೇ ಕೋವಿಡ್ ಸಂದರ್ಭದಲ್ಲಿ ಹಲವಾರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದೆ ಎಂದು ಹೇಳಿದರು.