ಹಾಸನ: ಕೋವಿಡ್ ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕಡ್ಡಾಯವಾಗಿ ಕೊಳಗೇರಿಯಲ್ಲಿನ ಜನರು, ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಹಾಗೂ ಕ್ಷೌರಿಕರನ್ನು ಹಾಗೂ ಇತರ ಆರೋಗ್ಯ ಅಪಾಯಗಳನ್ನು ಎದುರಿಸುತ್ತಿರುವವರನ್ನು ಪತ್ತೆ ಮಾಡಿ ತಪಾಸಣೆಗೆ ಒಳಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೋವಿಡ್-19 ಪರೀಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಆದೇಶ ಹೊರಡಿಸಿದ್ದು, ಕಳೆದ ಐದು ದಿನದಲ್ಲಿ 1,795 ಜನರನ್ನು ಪರೀಕ್ಷೆ ಮಾಡಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಿ ಎಲ್ಲಾ ಸೋಂಕಿತರಿಗೂ ಉತ್ತಮ ಮೂಲಭೂತ ಸೌಕರ್ಯವನ್ನು ಕಡ್ಡಾಯವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೋವಿಡ್ ಆಸ್ಪತ್ರೆಯಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಆಹಾರ, ಕುಡಿಯುವ ನೀರು ನೀಡಿ ಸ್ನಾನಕ್ಕೆ ಪ್ರತ್ಯೇಕ ಬಕೆಟ್ ಒದಗಿಸಿ ಹಾಗೂ ಮೂರು ಬಾರಿ ಕೊಠಡಿ ಸ್ಚಚ್ಛತೆ ಮಾಡಬೇಕು ಮತ್ತು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದರು.
ಲಾಕ್ಡೌನ್ ಸಮಯದಲ್ಲಿ ಪಡಿತರ ಚೀಟಿ ಹೊಂದಿದವರಿಗೆ, ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಹಾಗೂ ಹೊರ ರಾಜ್ಯದ ಕಾರ್ಮಿಕರಿಗೆ ಪಡಿತರ ನೀಡಲಾಗಿದೆ. ಮುಂದೆಯೂ ಸಂಕಷ್ಟಕ್ಕೆ ಈಡಾದ ಜನರಿಗೆ ಅವರ ಆಧಾರ್ ಕಾರ್ಡ್ ಆಧಾರದಲ್ಲಿಯೇ ಪಡಿತರ ನೀಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಪ್ರತ್ಯೇಕವಾದ ಆಸ್ಪತ್ರೆ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ ಹಾಗೂ ಖಾಸಗಿ ಆಸ್ಪತ್ರೆಗಳ ಅವಶ್ಯಕತೆ ಉಂಟಾದರೆ ಸಹಕರಿಸುವಂತೆ ಅವುಗಳ ಮುಖ್ಯಸ್ಥರ ಸಭೆ ನಡೆಸಿ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.