ಹಾಸನ : ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಹಾನಿಗೊಳಗಾದ ಕುಟುಂಬಗಳ ಸಂಪೂರ್ಣ ಮಾಹಿತಿ ಪಡೆದು ಸರ್ಕಾರದ ಮಾರ್ಗಸೂಚಿಯಂತೆ ಶೀಘ್ರ ಪರಿಹಾರ ಒದಗಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಹಾನಿ ಹಾಗೂ ಪರಿಹಾರ ಕ್ರಮಗಳ ಕುರಿತು ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು. ಈ ವೇಳೆ ಅವರು ವಿವಿಧ ಪರಿಹಾರ ವಿತರಣೆಯ ಕುರಿತು ಚರ್ಚೆ ನಡೆಸಿದರು. ಜೊತೆಗೆ, ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ 5 ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚಿಸಿದರು.
ರೈತರ ಬೆಳೆ, ಮನೆ, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ದುರಸ್ಥಿ ಹಾಗೂ ಪುನರ್ ನಿರ್ಮಾಣಕ್ಕೆ ಪರಿಹಾರ ಒದಗಿಸಿ ಹಾಗೂ ರಸ್ತೆ, ಸೇತುವೆ ದುರಸ್ಥಿಗಳ ತಾಲೂಕುವಾರು ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಹೇಳಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮರಗಳು ಬಿದ್ದು ಅಥವಾ ಭೂ ಕುಸಿತದಿಂದ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಲು ಸೂಚಿಸಿದರು. ಅಲ್ಲದೆ, ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅತಿಯಾದ ಮಳೆಯಿಂದ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. 48 ಗಂಟೆಯೊಳಗೆ ಸಮಸ್ಯೆ ಪರಿಹರಿಸಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ವಿದ್ಯುತ್ ಕಂಬಗಳು ಮತ್ತು ಸಿಬ್ಬಂದಿ ವರ್ಗವನ್ನು ನೆರೆ ಜಿಲ್ಲೆಗಳಿಂದ ಪಡೆದುಕೊಳ್ಳುವಂತೆ ಸೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಕೋವಿಡ್ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ದಿನನಿತ್ಯ ಏರಿಕೆಯಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ 5 ಐಸಿಯು ಬೆಡ್‌ಗಳನ್ನು ತುರ್ತು ಪರಿಸ್ಥಿತಿಗಾಗಿ ಕಾಯ್ದಿರಿಸುವಂತೆ ಹಾಗೂ ಉಳಿದವರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುವಂತೆ ಸೂಚಿಸಿದರು. ಜೊತೆಗೆ ಚಿಕಿತ್ಸಾ ವಿಧಾನದಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸುವಂತೆ ತಿಳಿಸಿದರು. ಜಿಲ್ಲೆಯ ಯಾವುದೇ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇಂದ್ರಗಳಲ್ಲಿ ಔಷಧಗಳ ಕೊರತೆಯಾಗಬಾರದು ಮತ್ತು ಊಟೋಪಚಾರ ಹಾಗೂ ಶೌಚಾಲಯಗಳ ಉತ್ತಮ ವ್ಯವಸ್ಥೆ ಒದಗಿಸಬೇಕು. ಇದಕ್ಕೆ ಬೇಕಾದ ಪೂರಕ ಸೌಲಭ್ಯಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗುತ್ತದೆ. ಯಾವುದೇ ಕೊರತೆಯುಂಟಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಿ ಎಂದು ಸೂಚಿಸಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರು ಮಾತನಾಡಿ, ಕೋವಿಡ್‌ಗೆ ಮತ್ತು ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಿ ಕಟ್ಟುನಿಟ್ಟಿನ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಶಾಸಕರಾದ ಎ ಟಿ ರಾಮಸ್ವಾಮಿ, ಹೆಚ್ ಡಿ ರೇವಣ್ಣ, ಹೆಚ್ ಕೆ ಕುಮಾರಸ್ವಾಮಿ, ಕೆ ಎಂ ಶಿವಲಿಂಗೇಗೌಡ, ಕೆ ಎಸ್ ಲಿಂಗೇಶ್ ಹಾಗೂ ಪ್ರೀತಂ ಜೆ. ಗೌಡ ಅವರು ಮಾತನಾಡಿ ಮಳೆಹಾನಿಗೊಳಗಾದ ಕುಟುಂಬಗಳಿಗೆ, ರೈತರಿಗೆ ಶೀಘ್ರ ಪರಿಹಾರ ಒದಗಿಸುವಂತೆ ಹಾಗೂ ಮಳೆಯಿಂದ ಹಾನಿಗೊಳಗಾದ ಶಾಲೆ ಮತ್ತು ಅಂಗನವಾಡಿ ಕಟ್ಟಡ, ರಸ್ತೆ ಹಾಗೂ ಸೇತುವೆಗಳ ದುರಸ್ಥಿಗೆ ಅನುದಾನ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.