ಮಹದೇವಪುರ, ಬೆಂಗಳೂರು: ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಗುರುವಾರ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್-19 ನಿರ್ವಹಣೆಗಾಗಿ ವಾರ್ಡ್ ಮಟ್ಟದಲ್ಲಿ ರಚಿಸಿರುವ ತುರ್ತು ಸ್ಪಂದನಾ ಸಮಿತಿಗಳ ಜೊತೆ ವರ್ಚುವಲ್ ಸಭೆ ನಡೆಸಿದರು.
ಈ ಸಭೆಯಲ್ಲಿ ಕೋವಿಡ್ -19 ನಿರ್ವಹಣೆಗಾಗಿ ತೆಗೆದುಕೊಂಡ ಕ್ರಮಗಳು ಹಾಗೂ ಬರುವ ದಿನಗಳಲ್ಲಿ ಕೋವಿಡ್ ಪಾಸಿಟಿವ್ ದರ ಕಡಿಮೆ ಮಾಡಲು ಕೈಗೊಳ್ಳಬೇಕಾದ ಅಂಶಗಳ ಕುರಿತು ಚರ್ಚೆ ನಡೆಸಿದರು. ನಾವೆಲ್ಲರೂ ಕೋವಿಡ್ನಿಂದ ಕಷ್ಟದ ದಿನಗಳನ್ನು ಅನುಭವಿಸುತ್ತಿದ್ದೇವೆ. ಇದು ಮಹಾಮಾರಿ ಕೊರೋನಾ ವಿರುದ್ಧದ ಹೋರಾಟ. ಎಲ್ಲರೂ ವೈಯಕ್ತಿಕ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಮಹದೇವಪುರ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಯ 8 ವಾರ್ಡ್ಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 6 ವಾರ್ಡ್ಗಳಲ್ಲಿ ವಾರ್ ರೂಮ್ ಸ್ಥಾಪನೆ ಮಾಡಲಾಗಿದೆ. ಜೊತೆಗೆ 6 ಟ್ರಯೇಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದ್ದು, ಸಮಿತಿಗಳನ್ನು ಕೂಡಾ ರಚಿಸಲಾಗಿದೆ. ಈ ಸಮಿತಿಯಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಹಾಗೂ ಸಹಾಯಕ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸ್ವಯಂಸೇವಕರು ಇದ್ದು, ಈಗಾಗಲೇ ಈ ಸಮಿತಿಯ ಸಭೆಗಳನ್ನು ಮಾಡಲಾಗಿದೆ ಎಂದು ಲಿಂಬಾವಳಿ ತಿಳಿಸಿದರು.
ಕನಿಷ್ಠ ಎರಡು ದಿನಕ್ಕೆ ಒಮ್ಮೆ ಎಲ್ಲಾ ವಾರ್ಡ್ ಸಮಿತಿಯವರು ಸಭೆ ಮಾಡಬೇಕು. ವಾರ್ಡ್ಗಳಲ್ಲಿ ಯಾರಿಗೆ ಪಾಸಿಟಿವ್ ಬಂದಿದೆ ಎಂಬ ಲಿಸ್ಟ್ ಅನ್ನು ಪ್ರತಿ ವಾರ್ಡ್ಗೆ ನೀಡಲಾಗುತ್ತಿದೆ. ಸ್ವಯಂ ಸೇವಕರು ವಾರ್ ರೂಮ್‌ನಿಂದ ದಿನಕ್ಕೆ ಮೂರು ಬಾರಿಯಾದರೂ ಕರೆ ಮಾಡಿ ಅವರನ್ನು ವಿಚಾರಿಸಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ಸೂಚಿಸಿದರು.
ಇದನ್ನೂ ಓದಿ: ಕೋವಿಡ್ ಲಸಿಕೆ ಕದ್ದು ಹಣ ಸಂಪಾದನೆ ಮಾಡುತ್ತಿದ್ದ ವೈದ್ಯೆ ಸೇರಿ ಇಬ್ಬರ ಬಂಧನ
ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳು ಟ್ರಯೇಜ್ ಸೆಂಟರ್ಗೆ ಭೇಟಿ ನೀಡಿ, ವೈದ್ಯರು ಸಲಹೆ ಪಡೆದು ಮುಂದಿನ ಚಿಕಿತ್ಸೆ ಪಡೆಯಬೇಕು. ವಾರ್ ರೂಮ್‌ನಿಂದ ಕರೆ ಮಾಡಿದರೂ ಕೋವಿಡ್ ವ್ಯಕ್ತಿಗಳು ಬರದಿದ್ದಾಗ ಪೊಲೀಸ್ ಇಲಾಖೆಯ ಸಹಾಯದಿಂದ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮಹದೇವಪುರ ಕ್ಷೇತ್ರದ ವಾರ್ಡ್ಗಳಲ್ಲಿ ಜಿಂಕ್ ಹೊಟೇಲ್, ಓಯೋ ಟೌನ್ ಹೌಸ್, ಕೀಸ್ ಹೊಟೇಲ್, ಆಕ್ಟಿವ್ ಹೋಟೆಲ್, ಐವಿರೋಜಾ ರೆಸಾರ್ಟ್ ಸೇರಿದಂತೆ ಗ್ರಾಮೀಣ ಭಾಗದ 9 ಪಂಚಾಯತಿಗಳಿಗೆ ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜುಗಳಲ್ಲಿ ಟ್ರಯೇಜ್ ಹಾಗೂ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಗಿದ್ದು, ಕೋವಿಡ್ ರೋಗಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಗ್ರಾಮೀಣ ಭಾಗದಲ್ಲಿ ಕೋವಿಡ್ ರೋಗಿಗಳಿರುವ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಇದೇ ರೀತಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಬೇಕು ಎಂದು ಸೂಚಿಸಿ, ಕೋವಿಡ್ ಪಾಸಿಟಿವ್ ಇದ್ದವರ ಮನೆ ಮುಂದೆ ಬಿಳಿ ಧ್ವಜ ಹಾಕಿ, ಅವರು ಕೋವಿಡ್ನಿಂದ ಗುಣಮುಖ ಆದ ನಂತರ ಅದನ್ನು ತೆಗೆದುಹಾಕಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಅಲ್ಲದೇ ಒಂದೇ ಭಾಗದಲ್ಲಿ ಹಾಗೂ ಒಂದೇ ಮನೆಯಲ್ಲಿ 5-6 ಕೇಸ್ಗಳು ಬಂದರೆ ಕಂಟೋನ್ಮೆಂಟ್ ಜೋನ್ ಮಾಡಿ, ಆನ್ ಲೈನ್ ಮೂಲಕ ಅವರಿಗೆ ಬೇಕಾದ ವ್ಯವಸ್ಥೆ ಮಾಡಬಹುದು ಎಂಬ ಸಲಹೆಯನ್ನು ಅರವಿಂದ್ ಲಿಂಬಾವಳಿ ನೀಡಿದರು.