ಹಾಸನ: ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ. ಬೇಕಾದರೆ ನನ್ನನ್ನು ಬಂಧಿಸಲಿ. ಜೈಲಿನಲ್ಲಿ ಊಟವಾದರೂ ಸಿಗುತ್ತೆ ಎಂದು ಪ್ರಸ್ತುತ ಸ್ಥಿತಿಯ ಬಗ್ಗೆ ಮಾಜಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಆಕ್ರೋಶ ಹೊರ ಹಾಕಿದರು. ಅಲ್ಲದೇ ನನ್ನನ್ನು ನೋಡಲು ಹೈಕೋರ್ಟ್ ನ್ಯಾಯಾಧೀಶರು ಬರುತ್ತಾರೆ. ಸರಿಯಾಗಿ ಊಟ ನೀಡುತ್ತಿದ್ದಾರಾ ಎಂದು ಪರಿಶೀಲಿಸುತ್ತಾರೆ ಎಂದರು.
ದೇಶದ ಪ್ರಧಾನಿ ಮತ್ತು ಸಿಎಂ ಹೇಳಿದ ಹಾಗೆ ಜನರು ಪಾಲಿಸಿದ್ದಾರೆ. ರಾಷ್ಟ್ರದ ದೊರೆ ಹೇಳಿದ ಹಾಗೆ ಕೇಳಿದ್ದೇವೆ. ದೀಪ ಹಚ್ಚಿ ಅಂದ್ರು ಹಚ್ಚಿದೆವು. ಯೋಗ ಮಾಡಿ, ಕ್ಲಾಪ್ ಮಾಡಿ ಅಂದರು ಮಾಡಿದ್ದೀವಿ. ಆದರೆ ಈಗ ನಮ್ಮ ರಾಷ್ಟ್ರದ ದೊರೆ ಹಸಿದ ಹೊಟ್ಟೆಗೆ ಅನ್ನ ಕೊಡಲಿ ಎಂದು ಆಗ್ರಹಿಸಿದರು. ರಾಜ್ಯದ ಜನರು ಸಿಎಂ ಫಂಡ್ಗೆ ನೀಡಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಹಣ ಇಲ್ಲ ಎಂದರೆ ಸಿಎಂಗೆ ಹಣ ಎಲ್ಲಿಂದ ಬರುತ್ತೆ ಅಂತ ನಾವು ತೋರಿಸುತ್ತೇವೆ.
ಪಕ್ಷಾತೀತವಾಗಿ ಜನರ ಸಮಸ್ಯೆ ಬಗ್ಗೆ ನಾವು ಕೈಜೋಡಿಸುತ್ತೇವೆ ಎಂದು ಕಿಡಿಕಾರಿದರು. ಬಡವರಿಗೆ ಅನ್ನ ನೀಡಲು ಯಾವ ಪಕ್ಷದ ಮೇಲೆ ರಾಜಕಾರಣ ಮಾಡಬೇಕಿಲ್ಲ. ಈ ಕೆಲಸದಲ್ಲಿ ನಾವೆಲ್ಲರೂ ಒಂದೇ ಎಂದು ರಾಜ್ಯದ ಜನತೆಯನ್ನು ಕಾಪಾಡಬೇಕು ಎಂದರು.