ಹಾಸನ: ಸರ್ಕಾರದ ಲಾಕ್ಡೌನ್ ಆದೇಶ ಪಾಲಿಸಿ ಎಂದು ಹೇಳಿದ ಪೇದೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪೆನ್ಷನ್ ಮೊಹಲ್ಲಾ ಬಡಾವಣೆ ನಿವಾಸಿ ಶಬ್ಬೀರ್ (40) ಬಂಧಿತ ಆರೋಪಿ. ಶುಕ್ರವಾರ ಮಧ್ಯಾಹ್ನದ ವೇಳೆ ವಲ್ಲಭಭಾಯ್ ರಸ್ತೆಯ ಮಟನ್ ಮಾರ್ಕೆಟ್ ವೃತ್ತದಲ್ಲಿ ಆಟೋ ಓಡಿಸಿಕೊಂಡು ಬಂದ ಶಬ್ಬೀರ್ನನ್ನು ತಡೆದ ಪೆನ್ಷನ್ ಮೊಹಲ್ಲಾ ಠಾಣೆಯ ಪೇದೆ, ಅನಗತ್ಯವಾಗಿ ಓಡಾಡಬಾರದು. ವಾಪಸ್ ಹೋಗು ಎಂದು ಹೇಳಿದ್ದಾರೆ. ಆದರೆ ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಟೋದಿಂದ ಕೆಳಗಿಳಿದ ಶಬ್ಬೀರ್ ಪೊಲೀಸ್ ಪೇದೆಯ ಕಪಾಳಕ್ಕೆ ಹೊಡೆದು ಕಿವಿಗೆ ಗುದ್ದಿದ್ದಾನೆ.
ನಂತರ ಪಕ್ಕದಲ್ಲಿದ್ದ ಕಲ್ಲು ಕೈಗೆತ್ತಿಕೊಂಡು ಎಸೆದಿದ್ದಾನೆ. ಪರಿಸ್ಥಿತಿಯ ಗಂಭೀರತೆ ಅರಿತ ಪೇದೆ ತಕ್ಷಣವೇ ಎಚ್ಚೆತ್ತು ಅಲ್ಲಿಂದ ಪರಾರಿಯಾಗಿದ್ದು, ಕಲ್ಲು ಮೈ ಮೇಲೆ ಬಿದ್ದಿಲ್ಲ. ಆದರೆ ಓಡುವಾಗ ಕಾಲು ಜಾರಿ ಬಿದ್ದು ಸ್ವಲ್ಪ ಏಟಾಗಿದೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಬ್ಬೀರ್ನನ್ನು ಬಂಧಿಸಲಾಗಿದೆ.