ಹಾಸನ: ಆಸ್ತಿ ಕಲಹ ಹಿನ್ನೆಲೆಯಲ್ಲಿ ಮಕ್ಕಳನ್ನು ಭೇಟಿಯಾಗಲು ಹೆಂಡತಿ ಅವಕಾಶ ನೀಡಲಿಲ್ಲ ಎಂದು ಕುಪಿತಗೊಂಡ ಪತಿ ಮನೆಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಜಿಲ್ಲೆಯ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಘಟನೆಯಲ್ಲಿ ಪತ್ನಿ ಗೀತಾ ಮತ್ತು ಮಕ್ಕಳಾದ ಚಿರಂತನ್ ಮತ್ತು ನಂದನ್ ಅವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಇವರೆಲ್ಲ ಮನೆಯಲ್ಲಿ ಮಲಗಿದ್ದಾಗ ಆರೋಪಿ ಗಂಡ ರಂಗಸ್ವಾಮಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಂಗಸ್ವಾಮಿ ಮತ್ತು ಗೀತಾ ದಂಪತಿ ನಡುವೆ ಮೊದಲಿನಿಂದಲೂ ಆಸ್ತಿ ಸಂಬಂಧ ಜಗಳವಾಗುತ್ತಿತ್ತು. ಈ ಬಗ್ಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು, ಪ್ರತಿದೂರು ದಾಖಲಿಸಿದ್ದರು. ಅಲ್ಲದೆ, ಕಳೆದ ನಾಲ್ಕು ತಿಂಗಳಿನಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಗೀತಾ ಇಬ್ಬರು ಮಕ್ಕಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.
ಪತಿ ರಂಗಸ್ವಾಮಿ ಮಕ್ಕಳನ್ನು ಭೇಟಿ ಮಾಡಿ ಅವರ ಜೊತೆ ಕಾಲ ಕಳೆಯುತ್ತಿದ್ದ. ಆದರೆ, ಶುಕ್ರವಾರ ಗೀತಾ ತಮ್ಮ ಪುತ್ರರನ್ನು ಭೇಟಿಯಾಗಲು ಅವಕಾಶ ನಿರಾಕರಿಸಿದ್ದರು. ಎಷ್ಟೇ ಕೇಳಿಕೊಂಡರೂ ಮಕ್ಕಳನ್ನು ನೋಡಲು ಬಿಟ್ಟಿರಲಿಲ್ಲ ಎನ್ನಲಾಲಾಗ್ತಿದೆ.
ಇದರಿಂದ ಕೋಪಗೊಂಡ ರಂಗಸ್ವಾಮಿ ಮಧ್ಯರಾತ್ರಿ ತನ್ನ ಪತ್ನಿ ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದಾಗ ಪೆಟ್ರೋಲ್ ಹಾಕಿ ಮನೆಗೆ ಬೆಂಕಿ ಹಚ್ಚಿದ್ದಾನೆ. ಮನೆ ಹೊತ್ತಿ ಉರಿಯುತ್ತಿರುವುದನ್ನು ಕಂಡ ಅಕ್ಕಪಕ್ಕದ ಮನೆಯವರು ಬಂದು ತಾಯಿ, ಮಕ್ಕಳನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಮನೆ ಸುಟ್ಟು ಕರಕಲಾಗಿದೆ. ಘಟನೆ ಬಗ್ಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ರಂಗಸ್ವಾಮಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ.. ಸವದತ್ತಿಯಲ್ಲಿ ದುರಂತ