ಸಕಲೇಶಪುರ: ಗೋ ಮಾಂಸದ ರಕ್ತವನ್ನು ಮನೆ ಮುಂದೆ ಹರಿಸಬೇಡಿ. ದುರ್ವಾಸನೆ ತಡೆಯುವುದಕ್ಕೆ ಆಗುವುದಿಲ್ಲ ಎಂಬ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಅಪ್ಸರ್ ಪಾಷಾ (32) ಮೃತಪಟ್ಟ ದುರ್ದೈವಿ. ಗೋಮಾಂಸ ಮಾರಾಟ ಮತ್ತು ಅದರ ಮಾಂಸದ ತ್ಯಾಜ್ಯವನ್ನು ಮನೆಯ ಮುಂದೆ ಹರಿಸದಂತೆ ಹೇಳಿದ್ದಕ್ಕೆ ರೊಚ್ಚಿಗೆದ್ದ ಮಾಂಸದಂಡಿಯ ಮಾಲೀಕನ ಮಕ್ಕಳು ನಡುಬೀದಿಯಲ್ಲಿಯೇ ಅಡ್ಡಿಪಡಿಸಿದವನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.
ಏನಿದು ಪ್ರಕರಣ: ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಹಾಜಿ ಖುರೇಷಿ ಕುಟುಂಬದವರು ಹಸುಗಳ ಮಾಂಸ ಸ್ವಚ್ಛ ಮಾಡಿದ ನೀರನ್ನು ಚರಂಡಿಯಲ್ಲಿ ಹರಿ ಬಿಡುತ್ತಿದ್ದರು. ಇದು ಅಪ್ಸರ್ ಮನೆಯ ಮುಂದೆ ನಿಲ್ಲುತ್ತಿದ್ದ ಕಾರಣ ವಿಪರೀತ ದುರ್ವಾಸನೆ ಬೀರುತ್ತಿತ್ತು. ಇದೇ ವಿಚಾರವಾಗಿ ಕಳೆದ ಕೆಲವು ತಿಂಗಳುಗಳ ಹಿಂದೆ ಅಪ್ಸರ್ ಹಾಗೂ ಹಾಜಿ ಖುರೇಷಿ ಕುಟುಂಬಗಳ ನಡುವೆ ಸಣ್ಣಪುಟ್ಟ ಜಗಳವಾಗಿದ್ದವು.
ಇದಾದ ನಂತರ ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೋಲಿಸರು ಎರಡ್ಮೂರು ಬಾರಿ ಹಾಜಿ ಖುರೇಷಿ ಅವರ ಅಂಗಡಿಯಿಂದ ಅಕ್ರಮ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಇದಕ್ಕೆ ಅಪ್ಸರ್ ಕುಟುಂಬವೇ ಕಾರಣ ಎಂದು ಆಗಾಗ ಅಪ್ಸರ್ ಕುಟುಂಬದ ಜೊತೆ ಹಾಜಿ ಖುರೇಷಿ ಗ್ಯಾಂಗ್ ಕ್ಯಾತೆ ತೆಗೆಯುತ್ತಿತ್ತು. ಇದೇ ವಿಷಯವಾಗಿ ಅಪ್ಸರ್ ಸಹೋದರ ಇಮ್ರಾನ್ ಎಂಬಾತನ ಮೇಲೆ ಗುರುವಾರ ಹಾಜಿ ಖುರೇಷಿ ಮತ್ತವರ ಗ್ಯಾಂಗ್ ಹಲ್ಲೆ ನಡೆಸಿತ್ತು.
ಈ ವಿಚಾರ ತಿಳಿದ ಅಪ್ಸರ್, ಹಾಜಿ ಖುರೇಷಿ ಗ್ಯಾಂಗಿನ ಜೊತೆ ಜಗಳವಾಡಿದ್ದಾರೆ. ಈ ವೇಳೆ, ಏಕಾಏಕಿ ಗ್ಯಾಂಗ್ ಅಪ್ಸರ್ ಮೇಲೆ ಹಲ್ಲೆ ನಡೆಸಿದೆ. ಹಾಜಿ ಖುರೇಷಿ ಗ್ಯಾಂಗಿನ ಏಸಾನ್ ಖುರೇಷಿ ಎಂಬಾತ ಚೂರಿಯಿಂದ ಅಪ್ಸರ್ ಪಾಷಾ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾನೆ. ತಕ್ಷಣ ಗಾಯಗೊಂಡ ಅಪ್ಸರ್ ಅವರನ್ನು ಕ್ರಾಪರ್ಡ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದುಕೊಂದು ಹೋಗಲಾಗುತ್ತಿತ್ತು. ಆ ಮಾರ್ಗ ಮಧ್ಯೆದಲ್ಲಿಯೇ ಅಪ್ಸರ್ ಉಸಿರು ಚೆಲ್ಲಿದ್ದರು.
ಘಟನಾ ಸ್ಥಳಕ್ಕೆ ಎಎಸ್ಪಿ ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿಯಲ್ಲಿ ದೃಶ್ಯಾವಳಿಗಳ ಆಧಾರವಾಗಿಟ್ಟುಕೊಂಡು ಪ್ರಮುಖ ಆರೋಪಿ ಏಷಾನ್ ಖುರೇಷಿಯನ್ನು ವಶಕ್ಕೆ ಪಡೆದು ಉಳಿದ 4 ಮಂದಿಗೆ ಬಲೆ ಬೀಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗದಗ ಕಾನ್ಸ್ಟೇಬಲ್ ಆತ್ಮಹತ್ಯೆ: ಪತ್ರಕರ್ತರು, ಪೊಲೀಸ್ ಸೇರಿ 9 ಮಂದಿ ಮೇಲೆ ಎಫ್ಐಆರ್