ಹಾಸನ/ಅರಸೀಕೆರೆ: ಕೊರೊನಾ ಮಹಾಮಾರಿಗೆ ಅನೇಕ ಜನರು ಸಾವನ್ನಪ್ಪುತ್ತಿದ್ದು, ಇದರಿಂದ ಪ್ರತಿದಿನ ಸಾವಿರಾರು ಜನರು ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಳ್ಳುತ್ತಿದ್ದಾರೆ. ಸದ್ಯ ಅಂತಹದೊಂದು ಘಟನೆ ಹಾಸನದಲ್ಲಿ ನಡೆದಿದೆ.
ಕೋವಿಡ್ನಿಂದ ಮಗಳ ರಕ್ಷಣೆ ಮಾಡಿದ್ದ ತಾಯಿಯನ್ನೇ ಇದೀಗ ಡೆಡ್ಲಿ ವೈರಸ್ ಬಲಿ ಪಡೆದುಕೊಂಡಿದೆ. ಹೌದು, ಸೋಂಕು ತಗುಲಿದ ಮಗಳನ್ನು ಉಳಿಸಿಕೊಳ್ಳಲು ಹಗಲು ರಾತ್ರಿ ಕಷ್ಟಪಟ್ಟು ಆರೈಕೆ ಮಾಡಿದ ತಾಯಿಯನ್ನೇ ಇದೀಗ ಕಿಲ್ಲರ್ ಕೊರೊನಾ ಬಲಿಪಡೆದುಕೊಂಡಿದೆ. ಇದರ ಜತೆಗೆ ಜೀವನಕ್ಕೆ ಆಸರೆಯಾಗಿದ್ದ ಒಂದು ಎಕರೆ ಜಮೀನನ್ನು ಮಾರುವಂತೆ ಮಾಡಿದೆ.
ಮಗಳನ್ನ ಬದುಕಿಸಿ ಪ್ರಾಣ ಬಿಟ್ಟ ತಾಯಿ
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬೆಲವತ್ತಹಳ್ಳಿ ಗ್ರಾಮದಲ್ಲಿಈ ಘಟನೆ ನಡೆದಿದೆ. 15 ದಿನಗಳ ಹಿಂದೆ ಬೆಲವತ್ತಹಳ್ಳಿಯ ಪುಪ್ಪ ಮತ್ತು ಮಂಜು ದಂಪತಿ ಮಗಳು ಕೊರೊನಾ ಸೋಂಕಿಗೊಳಗಾಗಿದ್ದಳು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದ ಕಾರಣ ಅರಸೀಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಾಲ್ಕು ದಿನಗಳ ಬಳಿಕ ಉಸಿರಾಟದ ಸಮಸ್ಯೆ ವಿಕೋಪಕ್ಕೆ ಹೋದ ಪರಿಣಾಮ, ಮಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. 17 ವರ್ಷದ ಮಗಳು ಹಾಸನ ಆಸ್ಪತ್ರೆಯ ವೆಂಟಿಲೇಟರ್ ಸೌಲಭ್ಯ ಪಡೆದು ಬದುಕುಳಿದಳು.ಗುಣಮುಖವಾದ ಮಗಳನ್ನು ಮನೆಗೆ ಕರೆತಂದ ಬೆನ್ನಲ್ಲೇ ಮಂಜುನಾಥ್ ಪತ್ನಿ 43 ವರ್ಷದ ಪುಷ್ಪ ಅವರಿಗೂ ಕೊರೊನಾ ಸೋಂಕು ತಗುಲಿ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಒಂದು ಎಕರೆ ಜಮೀನು ಮಾರಾಟ
ಅರಸೀಕೆರೆ ಆಸ್ಪತ್ರೆಯಲ್ಲಿ ನಾಲ್ಕು ದಿನ ಚಿಕಿತ್ಸೆ ನೀಡಲಾಗಿದೆ. ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ರೂ, ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕೋವಿಡ್ ಕಾರಣದಿಂದ ಪತ್ನಿ, ಮಗಳ ಚಿಕಿತ್ಸೆಗಾಗಿ ಇರುವ ಒಂದು ಎಕರೆ ಜಮೀನನ್ನು ಬರೀ ನಾಲ್ಕು ಲಕ್ಷಕ್ಕೆ ಮಾರಾಟ ಮಾಡಿದ ಮಂಜುನಾಥ್ಗೆ ಇದ್ದ 4 ಲಕ್ಷ ರೂ. ಕೈಬಿಟ್ಟು ಹೋಗಿದೆ.
ಇದನ್ನೂ ಓದಿ: ಕೆಟ್ಟ ಮೇಲೆ ಬುದ್ಧಿ ಕಲಿತ ಗದಗ ಜಿಲ್ಲಾಡಳಿತ... ಕೊನೆಗೂ ಲಾಕ್ಡೌನ್ ಮೊರೆ
ಇದರ ಮಧ್ಯೆ ಇದೀಗ ಮಂಜುನಾಥ್ ಹಾಗೂ ಆತನ ಮಗನಿಗೂ ಕೋವಿಡ್ ಸೋಂಕು ದೃಢಗೊಂಡಿದ್ದು, ಆಸ್ಪತ್ರೆಗೆ ಸೇರಿಕೊಳ್ಳಲು ಹಣವಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಮಾಹಿತಿ ಹಂಚಿಕೊಂಡ ಹೆಚ್ಡಿ ರೇವಣ್ಣ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಾಸಕ ಹೆಚ್.ಡಿ ರೇವಣ್ಣ, ಮುಖ್ಯಮಂತ್ರಿಗಳು ಬಡವರ ಕಷ್ಟ ನೋಡುತ್ತಿಲ್ಲ, ನೀವಾದ್ರೂ ನೋಡಿ ಸ್ವಾಮಿ ಎಂದು ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ಬಳಿ ಹೇಳಿಕೊಂಡಿದ್ದಾರೆ.