ಹಾಸನ: ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಹಣ ಹೊಂದಿಸಲಾಗದೇ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿರುವ ಘಟನೆ ಹಾಸನ ತಾಲೂಕಿನ ದೊಡ್ಡಮಂಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಟೊಯೊಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಆರೋಪಿ.
ದೊಡ್ಡಮಂಡಿಗನಹಳ್ಳಿ ಗ್ರಾಮದ ಬಸವೇಗೌಡರ ಮಗ ಮಂಜುನಾಥ್ಗೆ 7 ವರ್ಷಗಳ ಹಿಂದೆ ತೇಜಸ್ವಿನಿ ಎಂಬುವರ ಜೊತೆ ಮದುವೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ 150 ಗ್ರಾಂ ಚಿನ್ನ, ಲಕ್ಷಗಟ್ಟಲೆ ನಗದು ಕೊಡಲಾಗಿದೆ. ನಂತರ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ನನ್ನ ಮಗಳಿಗೆ ಮಂಜುನಾಥ್ ಮತ್ತು ಆತನ ಪೋಷಕರು ಕಿರುಕುಳ ನೀಡಲಾರಂಭಿಸಿದರು. ಈ ವಿಚಾರವಾಗಿ ಅನೇಕ ಬಾರಿ ಗ್ರಾಮಸ್ಥರು ಚರ್ಚಿಸಿ ರಾಜಿ ಮಾಡಿಸಿದ್ದರು ಎಂದು ತೇಜಸ್ವಿನಿ ಪಾಲಕರು ತಿಳಿಸಿದ್ದಾರೆ.
ಮಂಜುನಾಥ್ 80 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ. ಆದ್ರೆ ಆನ್ಲೈನ್ ಜೂಜಾಟ ಹಾಗು ಕ್ರಿಕೆಟ್ ಬೆಟ್ಟಿಂಗ್ಗೆ ದಾಸನಾಗಿ ಹಣ ಕಳೆದುಕೊಂಡಿದ್ದನಂತೆ. ಇದ್ದ ಕೆಲಸವನ್ನೂ ಕಳೆದುಕೊಂಡ ಆತ, ಬೆಂಗಳೂರಿನಿಂದ ವಾಪಸ್ ಹಾಸನಕ್ಕೆ ಬಂದಿದ್ದ. ಕುಟುಂಬ ನಿರ್ವಹಣೆಗಾಗಿ ಪತಿ ಕಷ್ಟಪಡುವುದನ್ನು ನೋಡದೆ, ತೇಜಸ್ವಿನಿ ಸಹ ಕೆಲಸಕ್ಕೆ ಹೋಗಲು ಮುಂದಾಗಿದ್ದಾರೆ. ಇದನ್ನು ಸಹಿಸದ ನನ್ನ ಅಳಿಯ ಮಗಳ ಶೀಲದ ಮೇಲೆ ಅನುಮಾನಪಟ್ಟು ಆಕೆಯನ್ನು ಮನೆಯ ರೂಮ್ನಲ್ಲಿ ಕೂಡಿಹಾಕಿ ಬಳಿಕ ತವರು ಮನೆಯಿಂದ ಎಲ್ಲ ಆಸ್ತಿ ಬರೆಯಿಸಿಕೊಂಡು ಬರುವಂತೆ ಹಿಂಸಿಸಿ ಮಗಳನ್ನ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದರು. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಮತ್ತು ತಾಯಿ ಸರೋಜಮ್ಮ ಹಾಗೂ ತಂದೆ ಬಸವೇಗೌಡರ ಮೇಲೆ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆ ಕೊಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಂಧಿತರಾದ ಎಲ್‌ಇಟಿ ಭಯೋತ್ಪಾದಕರಲ್ಲಿ ಓರ್ವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥನಾಗಿದ್ದ!