ಹಾಸನ : ನಮ್ಮ ಮೈತ್ರಿ ಸರ್ಕಾರದಲ್ಲಿ ಉತ್ತಮ ಕೆಲಸಗಳು ಆಗಿದೆ ಎಂದರೆ ಅದಕ್ಕೆ ಸ್ವಾಮೀಜಿಯವರ ಆಶೀರ್ವಾದ ಬಹಳಷ್ಟಿದೆ. ಅದೇ ರೀತಿ ವಿಶ್ವದಲ್ಲಿ ಅತಿ ಹೆಚ್ಚು ವಿದ್ಯಾಸಂಸ್ಥೆಗಳನ್ನು ಹೊಂದಿರುವ ಮಠ ಯಾವುದಾದರೂ ಇದೆಯೆಂದರೆ ಅದು ಆದಿಚುಂಚನಗಿರಿ ಮಠ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅಭಿಪ್ರಾಯಪಟ್ಟರು.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ವೇಲಾಪುರಿ ಸಭಾಮಂಟಪದಲ್ಲಿ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಕಾರ್ಯಕ್ರಮದ 75ನೇ ಅಮೃತ ಮಹೋತ್ಸವ ಹಾಗೂ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಯವರ ಮುತ್ತಿನ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಅಂತಹವರ ಒಳಿತಿಗಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸ್ವಾಮೀಜಿ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಇನ್ನೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ 1800 ವರ್ಷಗಳ ಇತಿಹಾಸವಿದೆ. ಅದನ್ನು ಅಂದಿನ ಸ್ವಾಮೀಜಿಯವರಾದ ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳು ಮಠವನ್ನು ಉತ್ತುಂಗ ಶಿಖರಕ್ಕೆ ಬೆಳೆಸಿದ್ದರು ಅದಾದ ಬಳಿಕ ಈಗ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಅವರು ನೀಡುವಂತಹ ಯಾವುದೇ ಕೆಲಸಗಳಿಗೆ ನಾವು ಮುಂಚೂಣಿಯಲ್ಲಿರುತ್ತೇವೆ ಅಂತ ಭರವಸೆ ನೀಡಿದರು.
ಡಾ. ಶ್ರೀ ನಿರ್ಮಲನಂದನಾಥ ಸ್ವಾಮಿಜೀಯವರ ರಜತ ತುಲಾಭಾರ ಸಮಾರಂಭದ ನಿಮಿತ್ತ ಪಟ್ಟಣದ ವಿಶ್ವವಿಖ್ಯಾತ ಚೆನ್ನಕೇಶವ ಸ್ವಾಮಿ ದೇವಾಲಯದ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವದ ಬೃಹತ್ ಮೆರವಣಿಗೆ ನಡೆಸಲಾಯಿತು.
ಕೇರಳದ ಚಂಡೆವಾದ್ಯ, ಮಂಗಳೂರಿನ ಗೊಂಬೆ ಕುಣಿತ ಹಾಗೂ ಕೀಲುಕುದುರೆ ಸೇರಿದಂತೆ ಇತರೆ ಸಾಂಸ್ಕೃತಿಕ ಕಲಾತಂಡಗಳು ಜನರ ಮನಸೆಳೆದವು.