ಸಕಲೇಶಪುರ: ಬಿ.ಎಂ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬನಿಗೆ ಲಾರಿ ಡಿಕ್ಕಿಯಾಗಿ ಅದರ ಚಕ್ರಕ್ಕೆ ಸಿಲುಕಿದ ಆತ ದಾರುಣವಾಗಿ ಸಾವಿಗೀಡಾಗಿದ್ದಾನೆ.
ಪಟ್ಟಣದ ತೇಜಸ್ವಿ ಚಿತ್ರಮಂದಿರದ ಬಳಿ ಮಂಗಳೂರಿನಿಂದ ಬೆಂಗಳೂರು ಕಡೆಗೆ ಸರಕು ತುಂಬಿಕೊಂಡು ಹೋಗುತ್ತಿದ್ದ ಲಾರಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಗ್ರಹಾರದ ಪ್ರವೀಣ್ (23) ಎಂಬುವವನಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಲಾರಿಯ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಆ್ಯಂಬುಲೆನ್ಸ್ ನಲ್ಲಿ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಯುವಕ ಕೊನೆಯುಸಿರೆಳೆದಿದ್ದಾನೆ.
ಅಪಘಾತ ನಡೆದು 15 ನಿಮಿಷಗಳ ಆದರೂ ಸ್ಥಳಕ್ಕೆ ಆ್ಯಂಬುಲೆನ್ಸ್ ಬಾರದಿದ್ದರಿಂದ ಲಾರಿಯ ಚಕ್ರದಡಿಗೆ ಸಿಲುಕಿದ ಯುವಕ ಒದ್ದಾಡುತ್ತಿದ್ದ ದೃಶ್ಯ ಸ್ಥಳದಲ್ಲಿ ನೆರೆದಿದ್ದವರ ಮನಕಲಕುವಂತಿತ್ತು. ಅಪಘಾತದ ಹಿನ್ನೆಲೆಯಲ್ಲಿ ಬಿ.ಎಂ ರಸ್ತೆಯಲ್ಲಿ ಅರ್ಧ ಕಿಲೋಮೀಟರ್ ವರೆಗೂ ಹೆಚ್ಚಿನ ದೂರ ವಾಹನಗಳು ಸಾಲುಗಟ್ಟಿ ನಿಂತು ಸಂಚಾರದಲ್ಲಿ ವ್ಯವಸ್ಥೆಯಲ್ಲಿ ಅಸ್ತವ್ಯಸ್ತವಾಗಿತ್ತು.
ಸಾರ್ವಜನಿಕರ ಆಕ್ರೋಶ:
ತೇಜಸ್ವಿ ಚಿತ್ರಮಂದಿರದ ಬಳಿ ಇರುವ ವೃತ್ತ ತೀರಾ ಕಿರಿದಾಗಿದ್ದು ಬೆಂಗಳೂರು, ಮಂಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂಪರ್ಕಿಸುವ ವೃತ್ತವಾಗಿರುವುದರಿಂದ ದಿನನಿತ್ಯ ಸಾವಿರಾರು ವಾಹನಗಳು ತಿರುಗಾಡುತ್ತಿರುತ್ತವೆ ಹಾಗೂ ಜನಸಂದಣಿಯ ಹೆಚ್ಚಾಗಿರುವುದರಿಂದ ಪದೇ ಪದೆ ಈ ಸ್ಥಳದಲ್ಲಿ ಅಪಘಾತವಾಗುತ್ತದೆ. ಆದ್ದರಿಂದ ಈ ವೃತ್ತವನ್ನು ಅಗಲಿಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.