ಹಾಸನ: ಸರ್ಕಾರ ವಿಕಲಚೇತನರಿಗೆ ನೀಡುತ್ತಿದ್ದ ಪೆನ್ಷನ್ ಹಣವನ್ನ 9 ತಿಂಗಳಿಂದ ನೀಡದ ಹಿನ್ನೆಲೆ ಮಹಿಳೆ ಮತ್ತು ಆಕೆಯ ಮಗ ಹೊತ್ತಿನ ಊಟಕ್ಕೂ ಇಲ್ಲದೆ ಪರದಾಡುತ್ತಿರುವ ಘಟನೆ ಹಾಸನ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಮಲ್ಲೇಶ್ವರ ನಗರದ ವಿವಾಸಿಗಳಾದ ವಿಕಲ ಚೇತನ ಮಹಿಳೆ ಭಾಗ್ಯಲಕ್ಷ್ಮಿ ಮತ್ತು ಆಕೆಯ ಮಗ ಹೂ ಕಟ್ಟಿ ವ್ಯಾಪಾರ ಮಾಡಿ ಬಂದ ಹಣ ಮತ್ತು ಪ್ರತಿ ತಿಂಗಳು ಬರುವ ಸರ್ಕಾರದ ಪೆನ್ಷನ್ ಹಣದಿಂದ ಹೇಗೋ ಜೀವನ ಸಾಗಿಸುತ್ತಿದ್ದರು. ಆದರೆ ಸತತ 9 ತಿಂಗಳಿನಿಂದ ಸರ್ಕಾರ ಪೆನ್ಷನ್ ನೀಡಿಲ್ಲ. ಇತ್ತ ಲಾಕ್ಡೌನ್ ಜಾರಿ ಇರುವುದರಿಂದ ಜೀವನ ನಡೆಸಲು ಯಾವುದೇ ದಾರಿ ಕಾಣದೆ ವಿಚಲಿತರಾಗಿದ್ದಾರೆ.
ಎರಡೂ ಕಾಲುಗಳಲ್ಲಿ ಸ್ವಾಧೀನವಿಲ್ಲದಿದ್ದರೂ ಬ್ಯಾಂಕ್, ಕಚೇರಿ ಎಂದು ಸುತ್ತಿದ ಭಾಗ್ಯಲಕ್ಷ್ಮಿಗೆ ಅಧಿಕಾರಿಗಳು ಖಾತೆಯಲ್ಲಿ ತಾಂತ್ರಿಕ ದೋಷವಿದೆ ಎಂದು ಹೇಳಿ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗೆ ಮೊದಲೇ ಬಡತನದಲ್ಲಿ ದಿನ ದೂಡುತ್ತಿದ್ದ ಭಾಗ್ಯಲಕ್ಷ್ಮಿ ಬದುಕು ಕೊರೊನಾ ಲಾಕ್ಡೌನ್ ನಂತರ ನಿತ್ಯ ನರಕವಾಗಿದೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆ, ರಾಜ್ಯ ಸರ್ಕಾರ ಮಹಿಳೆಗೆ ನೆರವಿನ ಹಸ್ತ ಚಾಚಿ ಸ್ಪಂದಿಸಬೇಕಿದೆ.