ಸಕಲೇಶಪುರ (ಹಾಸನ): ತಾಲೂಕಿನ ಹಾನುಬಾಳ್ ಹೋಬಳಿಯ ಅಗ್ನಿಗುಡ್ಡದ ರೆಸಾರ್ಟ್ವೊಂದರಲ್ಲಿ ಮೋಜು ಮಸ್ತಿಗಾಗಿ ಆಗಮಿಸಿದ್ದ ಯುವಕರನ್ನು ಸ್ಥಳೀಯರು ವಾಪಸ್ ಕಳುಹಿಸಿದ್ದಾರೆ.
ಎರಡು ದಿನಗಳ ಹಿಂದೆ ರೆಸಾರ್ಟ್‌ಗೆ 60ಕ್ಕೂ ಹೆಚ್ಚು ಮಂದಿ ಬೆಂಗಳೂರಿನಿಂದ ಬಂದು ತಂಗಿದ್ದರು. ರೆಸಾರ್ಟ್ನಲ್ಲಿ ಹೊರ ಊರಿನಿಂದ ಬಂದವರಿಂದ ಸ್ಥಳೀಯರಿಗೆ ಕೊರೊನಾ ಸೋಂಕು ತಗುಲುವ ಭೀತಿ ಹಿನ್ನೆಲೆ ಅತಿಥಿಗಳನ್ನು ತೆರವುಗೊಳಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ರೆಸಾರ್ಟ್‌ಗೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಹಾಗೂ ಓರ್ವ ಪೊಲೀಸ್ ಕಾನ್ಸ್ಟೇಬಲ್, ರೆಸಾರ್ಟ್ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಆದರೂ ರೆಸಾರ್ಟ್ ಮಾಲೀಕರು ಕ್ರಮ ಕೈಗೊಳ್ಳದ ಹಿನ್ನೆಲೆ ಗುರುವಾರ ಮಧ್ಯರಾತ್ರಿ ರೆಸಾರ್ಟ್‌ಗೆ ನುಗ್ಗಿದ ಸ್ಥಳೀಯರು, ಅಲ್ಲಿದ್ದ ಯುವಕರನ್ನು ಖಾಲಿ ಮಾಡಿಸಿದ್ದಾರೆ. 60ಕ್ಕೂ ಹೆಚ್ಚು ಯುವಕರನ್ನು ವಾಪಸ್ ಬೆಂಗಳೂರಿಗೆ ಕಳುಹಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಇಲಾಖೆ ವತಿಯಿಂದ ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರ ಸಭೆ ನಡೆಸಿ ಸರ್ಕಾರದ ನಿಯಮಗಳನ್ನು ಕಾಪಾಡುವಂತೆ ಆದೇಶಿಸಲಾಗಿತ್ತು. ಆದರೂ ಸಹ ಕೆಲವು ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಹಾನುಬಾಳ್ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.