ಹೊಳೆನರಸೀಪುರ: ಕೊರೊನಾ ಮಹಾಮಾರಿ ಹಾವಳಿಯಿಂದ ಜೀವನೋಪಾಯಕ್ಕಾಗಿ ಲಘು ಸಂಗೀತ ಮತ್ತು ಆರ್ಕೆಸ್ಟ್ರಾ ನಂಬಿಕೊಂಡ ಕಲಾವಿದರ ಬದುಕು ತೀರಾ ಸಂಕಷ್ಟದಲ್ಲಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ದಯವಿಟ್ಟು ಸರ್ಕಾರ ಈ ಕಲಾವಿದರಿಗೆ ಆರ್ಥಿಕ ನೆರವು ನೀಡಬೇಕು ಎಂದು ಅಖಿಲ ಕರ್ನಾಟಕ ಲಘು ಸಂಗೀತ ಸಾಂಸ್ಕೃತಿಕ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ವೈ.ಜೆ.ಅಜಿತ್ ಕುಮಾರ್ ಆಗ್ರಹಿಸಿದರು.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅಸಂಘಟಿತ ವಲಯದ ಕಲಾವಿದರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ. ಪ್ರಸ್ತುತ ರಾಜ್ಯಾದ್ಯಂತ 50 ಸಾವಿರಕ್ಕೂ ಅಧಿಕ ಆರ್ಕೆಸ್ಟ್ರಾ ಕಲಾವಿದರಿದ್ದು, ನಾವುಗಳು, ವಿವಾಹ ಮಹೋತ್ಸವ, ರಾಜ್ಯೋತ್ಸವ, ಜಾತ್ರೆ, ಹಬ್ಬ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಬರುವ ಸಂಭಾವನೆಯಲ್ಲಿ ಬದುಕು ಸಾಗಿಸುತ್ತಿದ್ದೆವು. ಕಾರ್ಯಕ್ರಮ ನೀಡುವ ಗಾಯಕರು, ನೃತ್ಯಗಾರರು, ಧ್ವನಿವರ್ಧಕ ತಂಡ, ತಾಂತ್ರಿಕ ವರ್ಗ ಸೇರಿದಂತೆ ಹಲವರ ಜೀವನ ನಿರ್ವಹಣೆಗೆ ಬಹಳ ತೊಂದರೆಯಾಗಿದ್ದು, ಸರ್ಕಾರ ಇವರಿಗೆ ಶೀಘ್ರವೇ ಆರ್ಥಿಕ ನೆರವು ನೀಡುವಂತೆ ಕೋರಿದರು.