ಹಾಸನ: ರೋಗಿಯ ಆರೋಗ್ಯ ದೃಢೀಕರಣ ಪತ್ರ ಪಡೆಯದೇ ಮರಣೋತ್ತರ ಹೇಳಿಕೆ ಹೋದ್ರೆ, ನ್ಯಾಯಾಲಯಗಳಲ್ಲಿ ನ್ಯಾಯ ಸಿಗದು ಎಂದು ಹಾಸನ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ಸರ್ಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ಹೇಳಿದ್ರು.
ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಆಯೋಜನೆ ಮಾಡಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, 2014ರಲ್ಲಿ ಪಾಳ್ಯ ಹೋಬಳಿ ಚಿಕ್ಕಕಣಗಾಲು ಗ್ರಾಮದಲ್ಲಿ ಮನೋಹರಿ ಎಂಬ ಮಹಿಳೆ ಮೇಲೆ ಸೀಮೆ ಎಣ್ಣೆ ಸುರಿದ ಪರಿಣಾಮ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಈ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
ವೈದ್ಯರ ದೃಢೀಕರಣ ಪತ್ರವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸದಿದ್ದರೆ ಪ್ರಕರಣ ಖುಲಾಸೆಯಾಗುವ ಸಂಭವ ಹೆಚ್ಚಾಗಿರುತ್ತದೆ. ಪ್ರಕರಣ ದಾಖಲಾಗುವ ಹಂತ ಸರಿಯಾಗಿದ್ದರೂ, ಪ್ರಕರಣದ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ತಡವಾದರೆ ನ್ಯಾಯಾಲಯಕ್ಕೆ ಅನುಮಾನ ವ್ಯಕ್ತವಾಗುತ್ತದೆ ಎಂದ್ರು.
ಬಳಿಕ ಮಾತನಾಡಿದ ಡಾ. ವಿಶ್ವನಾಥ್, ನ್ಯಾಯಾಂಗದ ಬಗ್ಗೆ ಜನಸಾಮಾನ್ಯರು ಆತ್ಮವಿಶ್ವಾಸ ಇಟ್ಟುಕೊಂಡಿದ್ದಾರೆ. ಸಾಕ್ಷಿಗಳು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಿ ಸತ್ಯಾಂಶ ಹೇಳಿದಾಗ ಮಾತ್ರ ತಪ್ಪಿತಸ್ತರು ಶಿಕ್ಷೆಗೊಳಗಾಗುತ್ತಾರೆ ಎಂದ್ರು.
ಡಿಎಸ್ಪಿ ಎಂ. ಎನ್. ಶಶಿಧರ್ ಅವರು ಮಾತನಾಡಿ, ಯಾವುದೇ ಪ್ರಕರಣದಲ್ಲಿ ಪೊಲೀಸ್, ವೈದ್ಯಕೀಯ ವರದಿ ಮತ್ತು ಸರ್ಕಾರಿ ಅಭಿಯೋಜಕರ ಪಾತ್ರ ಅತ್ಯಂತ ಮಹತ್ವವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಜಯರಾಮಶೆಟ್ಟಿ ಹಾಗೂ ವೈದ್ಯ ಡಾ.ವಿಶ್ವನಾಥ್ ರವರಿಗೆ ಪೊಲೀಸ್ ಇಲಾಖೆಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.