ಹಾಸನ: ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರ ಸಹೋದರರ ಮಕ್ಕಳು ಬಿಸಿಲಹಳ್ಳಿ ಗ್ರಾಮದಲ್ಲಿ ನೂರಾರು ಎಕರೆ ಭೂಮಿ ಕಬಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎ.ಮಂಜು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕಟ್ಟೆಯಮ್ಮ ದೇವಾಲಯದ ಅಭಿವೃದ್ಧಿಗೆ ಭೂಮಿ ಒತ್ತುವರಿ ತೆರವುಗೊಳಿಸಲು ಹೋಗುವ ರಾಮಸ್ವಾಮಿ, ಅವರ ಸಹೋದರರ ಮಕ್ಕಳ ಭೂ ಒತ್ತುವರಿ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು. ಶಾಸಕರ ಸಹೋದರರಾದ ವೇದಮೂರ್ತಿ, ಶ್ರೀನಾಥ್ ಸೇರಿದಂತೆ ಇತರರು ಬಿಸಲಹಳ್ಳಿಯಲ್ಲಿ ಸರ್ವೆ 91, 92, 93, 78ರಲ್ಲಿ ಅಂದಾಜು 70–80 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆ. ಜಮೀನು ಕಳೆದುಕೊಂಡವನ ಒಕ್ಕಲೆಬ್ಬಿಸುವುದರಲ್ಲಿ ಅರ್ಥವಿಲ್ಲ. ತಮ್ಮ ಪಕ್ಕದ ಜಮೀನಿನ ವಾಸೀಂ ಎಂಬುವರಿಗೆ ಖರಾಬ್ ಜಾಗವಿದ್ದರೂ ರಸ್ತೆ ನೀಡುತ್ತಿಲ್ಲ. ರಾಮಸ್ವಾಮಿ ಅವರು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ತಮ್ಮ ಮನೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಿಕೊಂಡಿದ್ದಾರೆ. ವಾಸೀಂ ಎಂಬುವರು ಜಮೀನಿಗೆ ಹೋಗದಂತೆ ಸುತ್ತಲೂ ಬೇಲಿ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಮಸ್ವಾಮಿ ಮಾತನಾಡುವಂತೆಯೇ ನಡೆದುಕೊಳ್ಳಬೇಕು. ಸತ್ಯಹರಿಶ್ಚಂದ್ರ ಅಂತ ಹೇಳಿಕೊಳ್ಳುವವರು ಹಾಗೆಯೇ ನಡೆದುಕೊಳ್ಳಬೇಕು. ಬೆಂಗಳೂರಿನ ಭೂ ಒತ್ತುವರಿ ತೆರವು ವಿರುದ್ಧ ಹೋರಾಟ ಮಾಡುವವರು ತಮ್ಮ ಕುಟುಂಬದ ಭೂ ಒತ್ತುವರಿ ಬಗ್ಗೆ ಸುಮ್ಮನಿರುವುದು ಏಕೆ ಎಂದು ಪ್ರಶ್ನಿಸಿದರು. ಅರಸೀಕಟ್ಟೆ ದೇವಾಲಯದ ಬಳಿ ರೈತನೊಬ್ಬ 45 ವರ್ಷಗಳಿಂದ 1.20 ಎಕರೆ ಉಳುಮೆ ಮಾಡುತ್ತಿದ್ದಾರೆ. ತೆಂಗಿನ ಮರಗಳು ಇವೆ. ಈ ಜಾಗವನ್ನು ಹೇಮಾವತಿ ಜಲಾಶಯ ಯೋಜನೆಗಾಗಿ ಮೀಸಲಿಡಲಾಗಿದೆ. ನಾಲೆಗಾಗಿ ಭೂಮಿ ಕಳೆದುಕೊಂಡಿರುವ ಇವರಿಗೆ ಹೆಚ್ಆರ್‌ಪಿ ಸರ್ಟಿಫಿಕೇಟ್ ಸಹ ನೀಡಲಾಗಿದೆ. ಕಾನೂನು ಪ್ರಕಾರ ಭೂಮಿ ಕೊಡಿಸಬೇಕು. ಆದರೆ, ತಹಶೀಲ್ದಾರ್ ಮೂಲಕ ಅವರನ್ನು ಒಕ್ಕಲೆಬ್ಬಿಸಲು ಯತ್ನಿಸಿರುವುದು ಸರಿಯಲ್ಲ. ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಮಾಡುವುದೂ ಇಲ್ಲ. ಈ ಚರ್ಚೆಗೆ ಆಹ್ವಾನಿಸಿದ್ದರೂ ಶಾಸಕರು ಬರಲಿಲ್ಲ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ವಿರುದ್ಧ ವಾಗ್ದಾಳಿ: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬದವರು ತಮ್ಮ ರಾಜಕೀಯ ಅನುಕೂಲಕ್ಕಾಗಿ ಯಾವ ತೀರ್ಮಾನ ಬೇಕಾದರೂ ಮಾಡಬಹುದು. ಮೋದಿ ಗೆದ್ದರೆ ದೇಶ ಬಿಟ್ಟೋಕ್ತಿನಿ ಅಂತ ಗೌಡರು, ರೇವಣ್ಣ ಹೇಳ್ತಿದ್ರು. ಈಗ ಮೋದಿ ಮೇಲೆ ಪ್ರೀತಿ ಬಂತು. ಸಿದ್ದರಾಮಯ್ಯ ವಿರುದ್ಧ ಮಾತನಾಡದ ರೇವಣ್ಣ ಈಗ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ರೇವಣ್ಣಗೆ ತಮ್ಮ ಮಗ ಗೆಲ್ಲಲು ಕಾರಣ ಯಾರು ಅಂತಾ ಗೊತ್ತಿದೆ. ಸಿದ್ದರಾಮಯ್ಯ ಅವರ ಕೈ ಕಾಲು ಹಿಡಿದು ಕರೆದುಕೊಂಡು ಬಂದು ಗೆಲ್ಲಿಸಿಕೊಂಡ್ರು. ಕುಮಾರಸ್ವಾಮಿ ಅವರು ಬಿಜೆಪಿ ಪರ ಮೃದು ಧೋರಣೆ ಹೊಂದಿದ್ದಾರೆ. ಫೋನ್ ಕದ್ದಾಲಿಕೆ, ಐಟಿ, ಐಎಂಎ, ಇಡಿಯಿಂದ ಪಾರಾಗಲು ಬಿಜೆಪಿ ಕಡೆ ಮುಖ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.