ಹಾಸನ: ಬಾಳೆಕಾಯಿ ಮಾಗಿಸುವ ಗುಂಡಿಯಿಂದ ಬಾಳೆಹಣ್ಣಿನ ಗೊನೆ ತೆಗೆಯಲು ಹೋದಾಗ ಉಸಿರುಗಟ್ಟಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಅಂಚಿಹಳ್ಳಿ ಬಳಿ ನಡೆದಿದೆ.
ಶಾಂತಿಗ್ರಾಮ ಹೋಬಳಿಯ ಅಂಚಿಹಳ್ಳಿ ನಿವಾಸಿಗಳಾದ ವೆಂಕಟೇಶ್(55) ಹಾಗೂ ಮಂಜೇಗೌಡ (50) ಮೃತರು. ಮೊಸಳೆ ಹೊಸಳ್ಳಿ ಸಮೀಪದ ಅಂಚಿಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಐದೂರು ಗ್ರಾಮದ ಜಾತ್ರೆ ಹಿನ್ನೆಲೆಯಲ್ಲಿ ಊರಿನ ಒಂದು ಸ್ಥಳದಲ್ಲಿ ಬಾಳೆಕಾಯಿ ಮಾಗಿಸುವ ಸಲುವಾಗಿ ಗುಂಡಿ ತೆಗೆಯಲಾಗಿತ್ತು. ಗುಂಡಿಯಿಂದ ಬಾಳೆಹಣ್ಣಿನ ಗೊನೆ ತೆಗೆಯಲು ಇಳಿದ ಇಬ್ಬರು ಉಸಿರುಕಟ್ಟಿ ಅಸ್ವಸ್ಥಗೊಂಡು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಗುಂಡಿ ಬಾಗಿಲು ತೆಗೆದ ಕೂಡಲೇ ಇಳಿದ ಕಾರಣ ಕ್ರಿಮಿನಾಶಕದ ವಾಸನೆ ಸೇವಿಸಿ ಅಸ್ವಸ್ಥರಾಗಿದ್ದರು. ಅಲ್ಲದೆ ನೆಲ ಮಾಳಿಗೆಯಲ್ಲಿ ಆಮ್ಲಜನಕದ ಕೊರತೆ ಎದುರಾಗಿತ್ತು. ಕೂಡಲೇ ಅಸ್ವಸ್ಥರನ್ನು ಆಂಬ್ಯುಲೆನ್ಸ್ನಲ್ಲಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿ ಮಧ್ಯೆಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೃಷ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.