ಹಾಸನ: ರಾಜ್ಯದಲ್ಲಿ ಅಲೆಮಾರಿ, ಕೊರಮ ಹಾಗು ಕೊರಚ ಸಮುದಾಯದ ಮೇಲೆ ನಿರಂತರವಾಗಿ ಸವರ್ಣೀಯರಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಆರೋಪಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹನುಮೇಗೌಡರ ಪಾಳ್ಯದಲ್ಲಿ ಅಲೆಮಾರಿ ಕೊರಮ ಜನಾಂಗದ ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಆದರೆ ತಾಲೂಕು ಆಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವಿಳಂಬವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಕಳೆದ ವಾರ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನಲ್ಲಿ ಅಲೆಮಾರಿ ಕುಳುವ ಸಮುದಾಯದ ತಹಶೀಲ್ದಾರ್ ಭಜಂತ್ರಿ ಅವರನ್ನು ಶಾಸಕರಾದ ದುರ್ಯೋಧನ ಐಹೊಳೆ ಅವರು ಕುತಂತ್ರದಿಂದ ರಾತ್ರೋರಾತ್ರಿ ವರ್ಗಾವಣೆ ಮಾಡಿದ್ದಾರೆ. ಅವರ ವರ್ಗಾವಣೆಯನ್ನು ರದ್ದು ಮಾಡಿ ಮತ್ತೆ ಅದೇ ಸ್ಥಳಕ್ಕೆ ನಿಯೋಜನೆ ಮಾಡುವಂತೆ ಕಿರಣ್ ಕುಮಾರ್ ಒತ್ತಾಯಿಸಿದರು.
ಕುಳುವ ಸಮಾಜದ ನುಲಿಯ ಚಂದಯ್ಯ ಅವರ 813 ನೇ ಜಯಂತಿ ಉತ್ಸವವನ್ನು ರಾಜ್ಯಾದ್ಯಂತ ಆಗಸ್ಟ್ 3ನೇ ತಾರೀಖಿನಂದು ಆಚರಿಸಬೇಕೆಂದು ಅವರು ಸರ್ಕಾರವನ್ನು ಇದೇ ವೇಳೆ ಆಗ್ರಹಿಸಿದ್ದಾರೆ.