ಹಾಸನ: ನಗರದ ಎವಿಕೆ ಮಹಿಳಾ ಕಾಲೇಜು ಎದುರು ಇರುವ ಟ್ಯಾಕ್ಸಿ ಸ್ಟ್ಯಾಂಡ್ ಆವರಣದಲ್ಲಿ ನಡೆದ ಚಿತ್ರಕಲಾ ಪ್ರದರ್ಶನವನ್ನು ರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಅನೇಕ ಕಲಾವಿದರು ಚಿತ್ರಕಲೆಗಳಲ್ಲಿ ಜಿಲ್ಲೆಯಿಂದ ಹೆಸರು ಮಾಡಿದ್ದಾರೆ. ಆದರೇ ಇಲ್ಲೊಂದು ಆರ್ಟ್ ಗ್ಯಾಲರಿ ಇಲ್ಲದಿರುವುದು ನೋವಿನ ಸಂಗತಿಯಾಗಿದೆ. ಮಹಾರಾಜ ಉದ್ಯಾನವನದಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸಿ, ಇಲ್ಲೊಂದು ಕ್ಯಾಂಟೀನ್, ಲೈಬ್ರರಿ ಸೇರಿದಂತೆ ಮೂಲಭೂತ ಸೌಲಭ್ಯವನ್ನು ಒದಗಿಸಬೇಕು ಎಂದು ಹೇಳಿದರು.
ಆರ್ಟ್ ಗ್ಯಾಲರಿ ಮಾಡಲು ಸರ್ಕಾರದಿಂದ 90 ಲಕ್ಷ ರೂ. ಅನುದಾನ ಬಂದು 3 ವರ್ಷಗಳಾದರೂ ಅದು ಯಾವ ಪ್ರಯೋಜನಕ್ಕೆ ಬಾರದೇ ಹಾಗೆ ಉಳಿದಿದೆ. ಈಗಿರುವ ಸಹಾಯಕ ನಿರ್ದೇಶಕರಿಗೆ ಈ ಬಗ್ಗೆ ಕೇಳಿದರೇ ಜಾಗ ತೋರಿಸಿ ಎಂದು ಹೇಳುತ್ತಾರೆ.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರಿಗೆ ಸ್ಥಳ ತೋರಿಸಲಾಗಿತ್ತು. ನಂತರ ವೈಯಕ್ತಿಕವಾಗಿ ಆಸಕ್ತಿ ತೋರಿಸಿ ಈ ವಿಚಾರವಾಗಿ ಸಭೆ ಕೂಡ ನಡೆಸಲಾಯಿತು. ಮಹಾರಾಜ ಉದ್ಯಾನವನದಲ್ಲಿರುವ ರಥ ನಿಲ್ಲಿಸುವ ಜಾಗ ನಿಗದಿಯಾಗಿ ಒಪ್ಪಿಗೆ ದೊರಕಿತ್ತು. ಜಿಲ್ಲಾಧಿಕಾರಿ ವರ್ಗಾವಣೆಯಾಗಿ ನಂತರ ಇದೇ ರೀತಿ ಅನೇಕ ಡಿಸಿಯವರು ಬದಲಾವಣೆಯಾಗುತ್ತಾ ಗ್ಯಾಲರಿ ಕನಸು ನನಸಾಗಲಿಲ್ಲ ಎಂದು ಕೆ ಟಿ ಶಿವಪ್ರಸಾದ್ ಬೇಸರ ವ್ಯಕ್ತಪಡಿಸಿದರು.