ಹಾಸನ : ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿಯನ್ನು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ನೆರೆ ಸಂತ್ರಸ್ಥರ ಸಮಸ್ಯೆಗಳ ನಿವಾರಣೆಗೆ ಧಾವಿಸಬೇಕು ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿಸಿದರು.
ಪಟ್ಟಣದ ಆಜಾದ್ ರಸ್ತೆಯಲ್ಲಿ ನೆರೆಯಿಂದ ಉಂಟಾದ ಹಾನಿಯನ್ನು ಪರಿಶೀಲನೆ ಮಾಡಿದ ನಂತರ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಯ ಬಗ್ಗೆ ಪರಿಶೀಲನೆ ಮಾಡಲು ಇಲ್ಲಿಗೆ ಬಂದಿದ್ದೇನೆ. ಕೇಂದ್ರ ಬಿಜೆಪಿಯವರು ಯಾಕೆ ನಮ್ಮ ರಾಜ್ಯವನ್ನು ತಾತ್ಸಾರ ಮನೋಭಾವದಿಂದ ನೋಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಮ್ಮ ಸರ್ಕಾರ ಇದಿಗ ಮನೆ ಬಿದ್ದು ಹೋದಾಗ ತಕ್ಷಣ ಹತ್ತು ಸಾವಿರ ಹಣ ನೀಡುತ್ತಿದ್ದೇವು. ಆದರೆ ಇದೀಗ ಕೇವಲ 5 ಸಾವಿರ ರೂ. ಮಾತ್ರ ನೀಡಲಾಗುತ್ತಿದೆ. ನಾನು ಮಾಹಿತಿ ತೆಗೆದುಕೊಂಡು ಮಾತನಾಡುತ್ತೇನೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇನ್ನು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ತಣ್ಣಗಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಇಲ್ಲದಿರುವುದರಿಂದ ಹಲವಾರು ಜಿಲ್ಲೆಗಳಲ್ಲಿ ಅತಿವೃಷ್ಟಿ ಪರಿಹಾರ ಕೆಲಸಗಳು ನಿಧಾನವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತ ತಲೆ ಹಾಕಿಲ್ಲ. ಹೈಕಮಾಂಡ್ ಬಳಿ ಹಣ ಕೇಳಲು ಹೆದರಿಕೆ ಇದ್ದರೆ ಸಿಎಂ ಸರ್ವ ಪಕ್ಷಗಳ ಸಭೆ ಕರೆಯಲಿ, ನಾವೇ ಖುದ್ದಾಗಿ ದೆಹಲಿಗೆ ಹೋಗಿ ಹಣ ಬಿಡುಗಡೆಗೆ ಪ್ರಧಾನಿಯವರಿಗೆ ಮನವಿ ಮಾಡುತ್ತೇವೆ ಎಂದರು.
ಈ ವೇಳೆ ಅತಿವೃಷ್ಟಿಯಿಂದ ತಾಲೂಕಿನಲ್ಲಿ ಮೃತಪಟ್ಟ ಇಬ್ಬರು ರೈತರ ಕುಟುಂಬಗಳಿಗೆ ಕೆಪಿಸಿಸಿ ವತಿಯಿಂದ ತಲಾ 50 ಸಾವಿರ ರೂ.ಗಳನ್ನು ದಿನೇಶ್ ನೀಡಿದರು. ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶಿವರಾಂ. ಮಾಜಿ ರಾಜ್ಯಸಭಾ ಸದಸ್ಯ ಜವರೇಗೌಡ, ಮಾಜಿ ಶಾಸಕ ಪುಟ್ಟೇಗೌಡ, ಜಿ.ಪಂ. ಅಧ್ಯಕ್ಷೆ ಶ್ವೇತಾ ದೇವರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್ ಮುಂತಾದವರು ಹಾಜರಿದ್ದರು.