ಹಾಸನ: ಒಂದು ವರ್ಷದಿಂದ ಹೆಮ್ಮಾರಿ ಕೊರೊನಾ ಜಿಲ್ಲೆಯಲ್ಲಿ ಸುಮಾರು 464 ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ಹಿನ್ನೆಲೆ ಸತತ ಒಂದು ವರ್ಷ ಕಾಲ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಇದೀಗ ಕೊನೆಗೂ ಕೋವ್ಯಾಕ್ಸಿನ್ ಹಾಸನಕ್ಕೆ ಆಗಮಿಸುತ್ತಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಕಲ ಸಿದ್ಧತೆ ನಡೆಸಿದೆ.
ಈಗಾಗಲೇ ಜಿಲ್ಲೆಯಲ್ಲಿ 18 ಸಾವಿರ ಮಂದಿ ಲಸಿಕೆ ಪಡೆಯಲು ಅಂತರ್ಜಾಲದ ಮೂಲಕ ನೋಂದಣಿ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ನಂತರ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಲಸಿಕೆ ಸಿಗಲಿದೆ. ಸರ್ಕಾರ ಯಾವ ರೀತಿಯ ಸೂಚನೆ ನೀಡುತ್ತದೆ ಎಂಬುದರ ಮೇಲೆ ಜಿಲ್ಲೆಯ ಜನರಿಗೆ ನೀಡಲಾಗುವುದು ಎಂದು ಡಿಹೆಚ್ಒ ಸತೀಶ್ ಮಾಹಿತಿ ನೀಡಿದದ್ದಾರೆ.
ಓದಿ:ರೈತರ ಸಾಲ ಮನ್ನಾ ಮಾಡಿದ್ದೇ ಅಪ್ಪ-ಮಕ್ಕಳ ಪಕ್ಷ: ಹೆಚ್.ಡಿ. ರೇವಣ್ಣ
ಕೋವ್ಯಾಕ್ಸಿನ್ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಜಿಲ್ಲೆಗೆ ಬರುವ ಸಾಧ್ಯತೆ ಇದೆ. ನಾಳೆಯಿಂದ ಪ್ರತಿ ಜಿಲ್ಲೆಯಲ್ಲಿಯೂ ಲಸಿಕೆ ನೀಡಲಾಗುವುದು. ಮೈಸೂರಿನಿಂದ ಕೋವ್ಯಾಕ್ಸಿನ್ ಬರುವ ಸಾಧ್ಯತೆ ಇದೆ. ಅದಕ್ಕೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ದೇವೆ. ಕಳೆದ ಮೂರು ದಿನಗಳ ಹಿಂದೆ ಆರೋಗ್ಯ ಇಲಾಖೆಯಿಂದ ಡ್ರೈರನ್ ಮಾಡಲಾಗಿದ್ದು, ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯದಿಂದ ಲಸಿಕೆ ಸಂಗ್ರಹಣ ರೆಫ್ರಿಜರೇಟರ್ ನೀಡಿದ್ದು, ಇದರಲ್ಲಿ ಸುಮಾರು 48 ಸಾವಿರ ಮಂದಿಗೆ ನೀಡುವಷ್ಟು ಲಸಿಕೆಯನ್ನ ಸುರಕ್ಷಿತವಾಗಿಡಬಹುದು ಎನ್ನುತ್ತಾರೆ ಸಂಗ್ರಹಣಾಗಾರದ ಮೇಲ್ವಿಚಾರಕಿ ಸಾಧಿಯಾ.