ಹಾಸನ: ಮಂಗಗಳನ್ನು ಅಮಾನುಷವಾಗಿ ಕೊಂದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಅರ್ಜಿ ಪ್ರಕರಣ ದಾಖಲಿಸಿ, ಹಾಸನ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅರಣ್ಯಾಧಿಕಾರಿಗಳನ್ನು ಪ್ರತಿವಾದಿಗಳಲ್ಲಿ ಮಾಡಿದ್ದು, ಮೂರು ದಿನ ಒಳಗೆ ವರದಿ ಸಲ್ಲಿಸಲು ಸೂಚನೆ ನೀಡಿತ್ತು. ಈ ಸಂಬಂಧ ವಿಚಾರಣೆ ನಡೆಸಲಾಗಿ ಸತ್ಯಾಂಶ ಹೊರಬಿದ್ದಿದೆ.
ಅಧಿಕಾರಿಗಳು ಬೇಲೂರು ತಾಲೂಕಿನ ಚೌಡನಹಳ್ಳಿ ಗ್ರಾಮಕ್ಕೆ ಜಿಲ್ಲಾಡಳಿತ ಭೇಟಿ ನೀಡಿದ್ದು, ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈಗಾಗಲೇ 38 ಮಂಗಗಳ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ. ಸುಮಾರು ಹದಿನೈದು ಮಂಗಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಘಟನೆ ಸಂಬಂಧ ಸ್ಥಳೀಯರಿಂದ ಮಾಹಿತಿ ಪಡೆದ ಜಿಲ್ಲಾಡಳಿತ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.
ಹೆಚ್ಚಿನ ಮಾಹಿತಿಗೆ: Shocking! ಹಾಸನದ ಚೌಡನಹಳ್ಳಿಯಲ್ಲಿ 30ಕ್ಕೂ ಹೆಚ್ಚು ಮಂಗಗಳ ಮಾರಣಹೋಮ
ಮಂಗಗಳ ಹತ್ಯೆ ಬಗ್ಗೆ ಪೊಲೀಸ್, ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಜು. 28ರಂದು ರಾತ್ರಿ 9 ರಿಂದ 11 ಗಂಟೆಯ ಸಮಯದಲ್ಲಿ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ಗ್ರಾಮಸ್ಥರ ಮಾಹಿತಿಯ ಪ್ರಕಾರ, ಬೆಳೆ ಹಾನಿ ಮಾಡುತ್ತಿದ್ದ ಮಂಗಗಳನ್ನು ಸಾಮೂಹಿಕ ಹತ್ಯೆ ನಡೆಸಲಾಗಿದೆ. ಬಾಳೆ ಹಣ್ಣಿಗೆ ವಿಷ ಹಾಕಿ ಮಂಗಗಳನ್ನು ಮಾರಣಹೋಮ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆ ಸಂಬಂಧ ಎರಡು ದಿನಗಳಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಎಸ್ಪಿ ಆರ್. ಶ್ರೀನಿವಾಸಗೌಡ ಮಾಹಿತಿ ನೀಡಿದ್ದಾರೆ.