ಹಾಸನ: ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಾಸನದಲ್ಲಿ ಸೈಕಲ್ ಪಾಥ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ಸ್ಟಷ್ಟನೆ ನೀಡಿದ್ದಾರೆ.
ಸಹ್ಯಾದ್ರಿ ವೃತ್ತದ ಬಳಿ ಸಂಜೆ ಯುಜಿಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಹಲವು ವರ್ಷಗಳಿಂದ ಯುಜಿಡಿ ಸಮಸ್ಯೆ ಮನಗಂಡು ದೇವಿಗೆರೆ ವೃತ್ತದಿಂದ ಮುಖ್ಯಮಂತ್ರಿ ನಗರೋತ್ಪಾನ ಯೋಜನೆ ಅಡಿ 1 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಾಯು ವಿಹಾರಕ್ಕೆ ಬರುವವರಿಗೆ ಉತ್ತಮ ಪರಿಸರ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಗರಸಭೆಯ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಒಳ್ಳೆ ಪ್ರಯತ್ನ ಮಾಡಲಾಗುತ್ತಿದೆ. ಹಾಸನದ ಮಾರ್ಕೆಟ್ ಜಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಹಾಯವಾಗುವ ರೀತಿ ಪಾರ್ಕಿಂಗ್ ವ್ಯವಸ್ಥೆಯ ಜೊತೆಗೆ ಪಾದಚಾರಿಗಳು ವಾಹನವನ್ನು ಪಾರ್ಕಿಂಗ್ ಮಾಡಿ, ಮಾರ್ಕೆಟ್ ಪ್ರದೇಶಕ್ಕೆ ಹೋಗುವ ರೀತಿ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಯೋಜನೆಗೆ 5 ಕೋಟಿ ರೂ ಹಣವನ್ನು ತಂದು ಸೈಕಲ್ ಪಾತ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಇದು ರಾಜ್ಯದಲ್ಲಿಯೇ ಮೊದಲ ಸೈಕಲ್ ಪಾತ್ ಆಗಲಿದೆ ಎಂದು ಪ್ರೀತಂಗೌಡ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೇರಳ, ಮಹಾರಾಷ್ಟದಿಂದ ಬರುವ ಚಾಲಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯ.!
ನಗರದ ಸ್ವಚ್ಛತೆ ಹಾಗೂ ಜನತೆಯ ಆರೋಗ್ಯದ ದೃಷ್ಟಿ, ರಸ್ತೆ ಬದಿ ವ್ಯಾಪಾರಿಗಳ ಹಿತ ರಕ್ಷಣೆ ಹಿನ್ನೆಲೆಯಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಫುಡ್ ಪಾರ್ಕ್ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ದೇವಿಗೆರೆ ವೃತ್ತದ ಬಳಿ ಪದೇ ಪದೆ ಸಮಸ್ಯೆಯಾಗುತ್ತಿತ್ತು. ಮುಖ್ಯಮಂತ್ರಿ ನಗರೋತ್ಪಾನ ಯೋಜನೆಯಡಿ 1 ಕೋಟಿ ವೆಚ್ಚದಲ್ಲಿ ನಗರಸಭೆ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ದೇವಿಗೆರೆ ವೃತ್ತದಿಂದ ಎಂಜಿನಿಯರಿಂಗ್ ಕಾಲೇಜುವರೆಗೂ ಸಂಪರ್ಕ ಕಲ್ಪಿಸುವ ಯುಜಿಡಿ ಕಾಮಗಾರಿ ಒಂದು ತಿಂಗಳಲ್ಲಿ ಮುಗಿಯಲಿದೆ. ಕಾಮಗಾರಿಯನ್ನು ಸರಿಯಾದ ಸಮಯಕ್ಕೆ ಮುಗಿಸದಿದ್ದರೆ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು ಎಂದು ಗುತ್ತಿಗೆದಾರರಿಗೆ ಪ್ರೀತಂಗೌಡ ಎಚ್ಚರಿಕೆ ನೀಡಿದರು.