ಹಾಸನ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ವಿರೋಧಿಸಿ ಪುಂಡಾಟಿಕೆ ನಡೆಸಿರುವ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಕರವೇ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿ ಕರವೇ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು, ಎಂಇಎಸ್ ವಿರುದ್ಧ ಘೋಷಣೆ ಕೂಗಿದರು. ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ವಿಚಾರವಾಗಿ ನಡೆದ ಹೋರಾಟಕ್ಕೆ ಜಾತಿ ಬಣ್ಣ ಕಟ್ಟುತ್ತಿರುವ ರಾಜಕಾರಣಿಗಳ ವಿರುದ್ಧ ಕಿಡಿಕಾರಿದರು.
ಸರ್ಕಾರ ಪ್ರತಿಮೆಗೆ ರಕ್ಷಣೆ ನೀಡಬೇಕು. ಮರಾಠಿಗರ ಶಿವಾಜಿ ಪ್ರತಿಮೆ ಕರ್ನಾಟಕದಲ್ಲಿ ಬಿಟ್ಟುಕೊಂಡಿರುವುದು ನಮ್ಮ ದೊಡ್ಡ ತಪ್ಪಾಗಿದೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮುಟ್ಟಿದರೆ ಶಿವಾಜಿ ಪ್ರತಿಮೆ ಎಲ್ಲಿದ್ದರೂ ಹುಡುಕಿ ಪುಡಿಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕದಲ್ಲಿ ಕನ್ನಡವೇ ನಮಗೆಲ್ಲ ಜಾತಿ, ಧರ್ಮವಾಗಿದೆ. ಜಾತಿ, ಧರ್ಮದ ಹೆಸರಲ್ಲಿ ಅಧಿಕಾರಕ್ಕೇರುವ ರಾಜಕಾರಣಿಗಳಿಗೆ ಇದು ಅರ್ಥ ಆಗಲ್ಲ. ಇವರು ಜಾತಿ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.